ಹೊನ್ನಾವರ: `ಶಿಕ್ಷಣವು ಅನ್ನ, ಅರಿವು ಮತ್ತು ಆನಂದವನ್ನು ನೀಡಬೇಕು. ಕಲೆ ನಮಗೆ ಆನಂದದ ಜೊತೆಗೆ ಪ್ರಾಮಾಣಿಕತೆಯನ್ನೂ ಕಲಿಸುತ್ತದೆ’ ಎಂದು ಮೈಸೂರು ಆಕಾಶವಾಣಿ ಕಾರ್ಯನಿರ್ವಾಹಕ ದಿವಾಕರ ಹೆಗಡೆ ಹೇಳಿದರು. ಹಡಿನಬಾಳದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆವಾರದಲ್ಲಿ ಭಾನುವಾರ ರಾಗಶ್ರೀ ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ ಹಾಗೂ ೨೦ ನೇವರ್ಷದ ವಾರ್ಷಿಕೋತ್ಸವ ಜರುಗಿತು.
ಭಾರತೀಯ ಶ್ರದ್ಧೆ ಬದುಕಬೇಕು. ನಮ್ಮ ಸಂಸ್ಕೃತಿಯ ಸಾರವನ್ನು ಉಳಿಸಿಕೊಳ್ಳಬೇಕು. ಕಲೆ ಮತ್ತು ಸಂಸ್ಕೃತಿ ಬೆಳವಣಿಗೆಗೆ ಹೊನ್ನಾವರ ತಾಲೂಕಿನ ಕೊಡುಗೆ ದೊಡ್ಡದು. ಡಾ. ಅಶೋಕ ಹುಗ್ಗಣ್ಣವರ ಅವರು ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಹುಟ್ಟುಹಾಕಿ ಸಾವಿರಾರು ವಿದ್ಯಾರ್ಥಿಗಳನ್ನು ಬೆಳಗಿಸಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಜಿ.ನಾಯಕ ಮಾತನಾಡಿ, ರಾಗಶ್ರೀ ಸಂಸ್ಥೆಯು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವವರನ್ನು ಗೌರವಿಸುತ್ತಿದೆ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಜಮಖಂಡಿಯ ಆಶುಕವಿ ನಾರಾಯಣ ಶಾಸ್ತ್ರಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಟಿವಿ, ಕಂಪ್ಯೂಟರ್, ಮೊಬೈಲ್ ಫೋನ್ ಗಳು ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡುತ್ತಿವೆ. ಇವುಗಳಿಗೆ ದಾಸರಾಗದೆ ನಮ್ಮ ಸಂಸ್ಕೃತಿಗೆ ಪೂರಕವಾದ ಕಲೆಯನ್ನು ಗೌರವಿಸಬೇಕು. ರಾಗಶ್ರೀ ಸಂಸ್ಥೆಯು ರಾಗದ ಸಿರಿಯನ್ನು ಬೆಳೆಸುತ್ತಿದೆ ಎಂದರು.
ಸಾಮವೇದ ವಿದ್ವಾಂಸ ವೇ.ಮೂ. ಸುಬ್ರಹ್ಮಣ್ಯ ಭಟ್ಟ ಮಾತನಾಡಿ ರಾಷ್ಟ್ರ ಮಟ್ಟದ ಕಲಾವಿದರನ್ನು ಕರೆಸಿ ಸಂಗೀತಲೋಕವನ್ನು ಸೃಷ್ಟಿಸಲಾಗಿದೆ. ಸಂಗೀತೋತ್ಸವ ನಿರಂತರವಾಗಿ ಮುಂದುವರಿಯಲಿ ಎಂದರು.
ಪ್ರಶಸ್ತಿ ಪ್ರದಾನ : ಪಂ. ಜಿ.ಆರ್.ಭಟ್ ಬಾಳೇಗದ್ದೆ ಅವರ ಸಂಸ್ಮರಣೆ,ಹಾಗೂ ಅವರ ನೆನಪಿನಲ್ಲಿ ಕೊಡಮಾಡುವ ರಾಗಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಹಿಂದೂಸ್ತಾನಿ ಸಂಗೀತ ಕಲಾವಿದ ಡಾ. ಅಶೋಕ ಹುಗ್ಗಣ್ಣವರ ಅವರಿಗೆ ಪ್ರದಾನ ಮಾಡಲಾಯಿತು.
ಹಿರಿಯ ಸಂಗೀತ ಕಲಾವಿದ ಕಡತೋಕ ಶಂಭು ಭಟ್ಟ, ಯಕ್ಷಗಾನ ಕಲಾವಿದ ಮಾದೇವ ಹೆಗಡೆ ಕಪ್ಪೆಕೆರೆ, ವೈದ್ಯ ಡಾ. ಸತೀಶ ಭಟ್ಟ, ನಿವೃತ್ತ ಪ್ರಾಚಾರ್ಯ ಎಸ್.ಜಿ.ಭಟ್ ಕಬ್ಬಿನಗದ್ದೆ ಅವರಿಗೆ ರಾಗಶ್ರೀ ಸನ್ಮಾನ ನೀಡಿ ಗೌರವಿಸಲಾಯಿತು. ಅಲ್ಲದೇ ರಾಷ್ಟ್ರ ಮಟ್ಟದ ಸಂಗೀತದಲ್ಲಿ ಸಾಧನೆಗೈದ ರಾಗಶ್ರೀಯ ವಿದ್ಯಾರ್ಥಿನಿ ರಂಜಿತಾ. ಡಿ. ನಾಯ್ಕ ಇವಳನ್ನು ಪುರಸ್ಕರಿಸಲಾಯಿತು.
ಧಾರವಾಡದ ಪಂ. ರಘುನಾಥ ನಾಕೋಡ ರವರ ತಬಲಾ ಸೋಲೋ ವಾದನಕ್ಕೆ ಶ್ರೀ ಶೇಷಾದ್ರಿ ಅಯ್ಯಂಗಾರ್ ಲೇಹರಾ ಸಾಥ್ ನೀಡಿದರು. ಡಾ. ರವೀಂದ್ರ ಕಾಟೋಟಿ ಅವರ ಸಂವಾದಿನಿ, ಡಾ. ಅಶೋಕ ಹುಗ್ಗಣ್ಣವರ ಅವರ ಗಾಯನ, ಪಂ. ರಘುನಾಥ ನಾಕೋಡ ರವರ ತಬಲಾ ಸಾಥ್ ಮತ್ತು ನಾದಶ್ರೀ ಕಲಾಕೇಂದ್ರಕುಮಟಾದ ಕಲಾವಿದರಿಂದ ಭರತನಾಟ್ಯ, ದಿ.ಶ್ರೀಪಾದ ಹೆಗಡೆ ಹಡಿನಬಾಳ ಸ್ಮರಣಾರ್ಥ ತೋಟಿ ಬಳಗದವರಿಂದ ಯಕ್ಷಗಾನ, ರಾಗಶ್ರೀಯ ಗಾನ – ನಾಟ್ಯ – ಯಕ್ಷ ವೈಭವ ಕಾರ್ಯಕ್ರಮ ಸೇರಿದ ಅಪಾರ ಕಲಾಪ್ರೆಮಿಗಳ ಮನ ರಂಜಿಸಿತು.ಸಂಗೀತಾ ನಾಯ್ಕ ಪ್ರಾರ್ಥಿಸಿದರು. ಕೃಷ್ಣ ಭಟ್ ವೇದ ಘೋಷಿಸಿದರು. ರಾಗಶ್ರೀ ಅಧ್ಯಕ್ಷ ವಿದ್ವಾನ್ ಶಿವಾನಂದ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಎನ್.ಜಿ.ಹೆಗಡೆ ಧನ್ಯವಾದ ಸಮರ್ಪಿಸಿದರು. ಹೊನ್ನಾವರದ ಬಿ.ಈ.ಒ ಎಸ್. ಎಂ.ಹೆಗಡೆ, ಪ್ರೌಢಶಾಲಾ ಮುಖ್ಯಶಿಕ್ಷಕರ ರಾಜ್ಯಾಧ್ಯಕ್ಷ ಶ್ರೀ ಎಲ್. ಎಂ.ಹೆಗಡೆ, ಶ್ರೀ ಕೆ. ವಿ. ಹೆಗಡೆ, ಶ್ರೀ ಎಸ್. ವಿ.ಹೆಗಡೆ ಕಲಾವಿದರನ್ನು ಗೌರವಿಸಿದರು. ಈ ಎಲ್ಲಾ ಕಾರ್ಯಕ್ರಮವನ್ನು ಶ್ರೀನಿಧಿ. ಆರ್.ನಾಯಕ ಇವಳು ಸುಂದರವಾಗಿ ನಿರೂಪಿಸಿದಳು