ಭಟ್ಕಳ: ಕ್ರಿಯಾಶೀಲ ಗೆಳೆಯರ ಸಂಘದ ನೇತ್ರತ್ವದಲ್ಲಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್, ಮಾವಿನಕುರ್ವೆ ಶ್ರೀಕುಟುಮೇಶ್ವರ ವಿವಿದೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ಹಾಗೂ ಜೆಸಿಐ ಭಟ್ಕಳ ಸಿಟಿ ಸಹಯೋಗದಲ್ಲಿ, ತಾಲೂಕು ಆಸ್ಪತ್ರೆ ಆಶ್ರಯದಲ್ಲಿ ಏ.24ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಚಿತ ಹೃದಯ ತಪಾಸಣಾ ಬೃಹತ್ ಶಿಬಿರ ಆಯೋಜಿಸಲಾಗಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹೃದಯ ರೋಗ ತಜ್ಞ ವೈದ್ಯ ಡಾ.ರಾಜೇಶ ಭಟ್ ಚಿತ್ತರಂಜನ್ ಮತ್ತು ಅವರ ತಂಡ ಹಾಗೂ ತಾಲೂಕು ಆಸ್ಪತ್ರೆಯ ತಜ್ಞ ವೈದ್ಯರನ್ನೊಳಗೊಂಡ ತಂಡ ಉಚಿತ ಹೃದಯ ತಪಾಸಣೆ ನಡೆಸಲಿದೆ. ಎಂದು ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಇಂದಿನ ದಿನಗಳಲ್ಲಿ ಅತಿ ಕಡಿಮೆ ವಯಸ್ಸಿನಲ್ಲಿಯೆ ಹೃದಯಾಘಾತಕ್ಕೆ ಒಳಗಾಗಿ ಮೃತರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ ‘ಪ್ರಿಕಾಶನ್ ಈಸ್ ಬೆಟರ್ ದೆನ್ ಕ್ಯೂರ್’ ಎನ್ನುವ ಶೀರ್ಷಿಕೆಯಡಿಯಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಉಚಿತವಾಗಿ ಬಿಪಿ ಚೆಕ್‍ಅಪ್, ಉಚಿತ ಇಸಿಜಿ ತಪಾಸಣೆ, ಉಚಿತ ಟಿಎಂಟಿ ತಪಾಸಣೆ ಹಾಗೂ ರೋಗಿಗಳಿಗೆ ಔಷಧಿ ಅಗತ್ಯವಿದ್ದಲ್ಲಿ ಉಚಿತ ಔಷಧಿ ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸುವ ಹಳೇ ರೋಗಿಗಳು ತಮ್ಮ ವೈದ್ಯರು ಹಿಂದೆ ನೀಡಿದ್ದ ಚೀಟಿಯನ್ನು ತರಬೇಕು. ಭಟ್ಕಳದ ಜನತೆ ಈ ಶಿಬಿರದ ಸುದುಪಯೋಗ ಪಡೆದುಕೋಳ್ಳಬೇಕೆಂದು ಕೋರಿದರು.
ಈಗಿನ ಯುವಜನರು ಹೆಚ್ಚಾಗಿ ಹೃದಯ ರೋಗಿದಿಂದ ಸಾವಿಗೀಡಾಗುತ್ತಿದ್ದಾರೆ. ಅಧಿಕ ಬಿಪಿ, ಹೆಚ್ಚು ದಪ್ಪಗಿರುವವರು, ಉಸಿರಾಟದ ಸಮಸ್ಯೆ ಇದ್ದವರು, ಸ್ವಲ್ಪ ತಿರುಗಾಡಿದಾಗ ಸುಸ್ತು ಹಾಗೂ ಎದೆ ನೋವು ಬರುತ್ತಿರುವವರು, ಎತ್ತರ ಏರುವಾಗ ಎದೆನೋವು ಕಾಣಿಸಿಕೊಳ್ಳುವವರು ಆದಷ್ಟು ತಪಾಸಣೆ ಮಾಡಿಕೊಳ್ಳಬೇಕು ಎಂದು ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಲಕ್ಷ್ಮೀಶ ಹೇಳಿದರು.
ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಮಾತನಾಡಿ, 40 ವರ್ಷದ ಒಳಗಿನ ಅನೇಕರು ನಮ್ಮ ಕಣ್ಣೆದುರಿಗೆ ಹಾರ್ಟ್ ಅಟ್ಯಾಕ್‍ನಿಂದ ಜೀವ ಕಳೆದುಕೊಂಡಿದ್ದಾರೆ. ಜನರು ಹೃದಯ ನೋವು ಕಾಣಿಸಿಕೊಂಡ ಕೂಡಲೇ ಅದನ್ನು ಗ್ಯಾಸ್ಟ್ರಿಕ್ ನೋವು ಅಂತ ಅಪಾರ್ಥ ಮಾಡಿಕೊಳ್ಳದೆ, ವೈದ್ಯರಲ್ಲಿ ಬಂದು ತಪಾಸಣೆ ಮಾಡಿಕೊಳ್ಳಬೇಕು ಎಂದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಮನಮೋಹನ ನಾಯ್ಕ ಮಾತನಾಡಿ, ಭಟ್ಕಳದ ಜನತೆ ಆರೋಗ್ಯವನ್ನು ಕಾಪಾಡುಕೊಳ್ಳುವ ದೃಷ್ಟಿಯಿಂದ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ವೆಂಕಟೇಶ ನಾಯ್ಕ ಎಲ್ಲರನ್ನು ಸ್ವಾಗತಿಸಿದರು. ಕ್ರೀಯಾಶೀಲ ಗೆಳೆಯರ ಸಂಘದ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಜೆಸಿಐ ಸಿಟಿ ಭಟ್ಕಳದ ಅಧ್ಯಕ್ಷ ಪಾಂಡು ನಾಯ್ಕ, ಶ್ರೀಕುಟುಮೇಶ್ವರ ವಿವಿದೋದ್ದೇಶಗಳ ಸೌಹಾರ್ದ ಸಂಘದ ಅಧ್ಯಕ್ಷ ರಾಮಾ ಖಾರ್ವಿ ಇದ್ದರು.