ಅಂಕೋಲಾ : ಹಾಡು ಹಕ್ಕಿಗಳೇ ಹಾರಿ ಬಾನಿಗೆ ಎಂಬ ಕಲ್ಪನೆಯಲ್ಲಿ ಕಳೆದ 15 ವರ್ಷಗಳಿಂದ ಸಂಗಾತಿ ರಂಗಭೂಮಿ ತಂಡವು ನೀನಾಸಂ ಮಾರ್ಗದರ್ಶನದಲ್ಲಿ ಆಯೋಜಿಸುತ್ತಾ ಬಂದ ಮಕ್ಕಳ ಬೇಸಿಗೆ ಶಿಬಿರದ ಅಂಗವಾಗಿ ಪಟ್ಟಣದ ಕೆಎಲ್‍ಇ ರಸ್ತೆಯಲ್ಲಿ ಮಕ್ಕಳ ಸಂತೆ ನಡೆಯಿತು. ಪಟ್ಟಣದ ಕೆ.ಎಲ್.ಇ ರಸ್ತೆಯಲ್ಲಿ ಮಕ್ಕಳು ವಿವಿಧ ಸಾಮಾಗ್ರಿಗಳನ್ನು ಸಿದ್ಧಪಡಿಸಿ ಸಾರ್ವಜನಿಕರಿಗೆ ಮಾರಾಟ ಮಾಡುವ ದೃಶ್ಯ ರಸ್ತೆಯಲ್ಲಿ ಓಡಾಡುವ ಸಂಚಾರಿಗಳಿಗೆ ವಿಶೇಷ ಬಗೆಯಲ್ಲಿ ಅನುಭವ ನೀಡಿತು. ಸುಮಾರು 25 ಮಾರಾಟ ಮಳಿಗೆ ಇಟ್ಟು ಸಂತೆ ನಡೆಸಿದ ರೀತಿ ವಾರದ ಸಂತೆ ನಡೆಸಿದ ಮಾದರಿಯಲ್ಲಿ ಕಂಡು ಬಂತು.
ಪುರಸಭೆಯ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಮಕ್ಕಳ ಸಂತೆ ಉದ್ಘಾಟಿಸಿ ಮಾತನಾಡಿ ಉತ್ತರ ಕನ್ನಡ ಜಿಲ್ಲೆಗೆ ಮಕ್ಕಳ ಸಂತೆ ಎಂಬ ಕಲ್ಪನೆಯನ್ನು ಜಾರಿಗೊಳಿಸಿ ಇಂದು ಇಡೀ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಸಂಗಾತಿ ರಂಗಭೂಮಿಯವರ ಹೆಗ್ಗಳಿಕೆಗೆ ಕಾರಣವಾಗಿದೆ ಎಂದರು.
ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವಕರ ಮಾತನಾಡಿ, ಮಕ್ಕಳಲ್ಲಿ ವ್ಯವಹಾರದ ಕುರಿತು ಅರಿವು ಮೂಡಿಸಲು ಇಂತಹ ಪ್ರಯೋಗಗಳು ಶಿಬಿರದಲ್ಲಿ ಮಾತ್ರವಲ್ಲದೇ ಪ್ರತಿ ಶಾಲೆಯಲ್ಲಿ ಆಯೋಜಿಸುವುದು ಅಗತ್ಯವೆಂದರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಾ ನಾಯ್ಕ, ಶಿಬಿರದ ನಿರ್ದೇಶಕ ಉಮಾಮಹೇಶ್ವರ ಹೆಗಡೆ, ಭಾಜಪಾ ಮಂಡಳಾಧ್ಯಕ್ಷ ಸಂಜಯ ಎಂ. ನಾಯ್ಕ, ಮೀನುಗಾರರ ಪ್ರಕೋಸ್ಟ ರಾಜ್ಯ ಸಂಚಾಲಕ ಹೂವಾ ಖಂಡೇಕರ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪಿ.ವೈ.ಸಾವಂತ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಚಂದ್ರಹಾಸ ರಾಯ್ಕರ, ಪುರಸಭೆ ಸಮೂದಾಯ ಸಂಘಟಕ ಡಿ.ಎಲ್.ರಾಠೋಡ, ಹಿಲ್ಲೂರು ಸಂಯುಕ್ತ ಪ್ರೌಢಶಾಲೆ ಪ್ರಾಚಾರ್ಯ ನಾಗರಾಜ ರಾಯ್ಕರ, ಗುರುದಾಸ ಪ್ರೌಢಶಾಲಾ ಮುಖ್ಯಾಧ್ಯಾಪಕ ಮಂಜುನಾಥ ನಾಯ್ಕ ಮುಂತಾದ ಗಣ್ಯರು ಮಕ್ಕಳ ಸಂತೆಯಲ್ಲಿ ಪಾಳ್ಗೊಂಡು ಮಕ್ಕಳನ್ನು ಪ್ರೋತ್ಸಾಹಿಸಿದರು.
ಸಂತೆಯಲ್ಲಿ ಮಕ್ಕಳು ವಿವಿಧ ತರಕಾರಿ, ಹಣ್ಣು ಹಂಫಲು, ತಿಂಡಿ-ತಿನಿಸು, ತಂಪು ಪಾನೀಯ ವಿವಿಧ ಬಗೆಯ ಆಟಿಕೆ ಸಾಮಾಗ್ರಿ ಹೀಗೆ ಹಲವು ಬಗೆಯ ಸಾಮಾಗ್ರಿಗಳನ್ನು ತಂದು ಸಾರ್ವಜನಿಕರನ್ನು ಆಕರ್ಷಿಸುವ ಧ್ವನಿಯಲ್ಲಿ ಕರೆದು ಮಾರಾಟ ಮಾಡುತ್ತಿದ್ದರು. ಮಕ್ಕಳೇ ಇಲ್ಲಿ ಮಾರಾಟಗಾರರು ಮತ್ತು ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದರು. ಅವರಿಗೆ ಅವರ ಪಾಲಕರು ಸಹಾಯ ನೀಡಿದರು.
ಶಿಬಿರದ ಸಂಘಟಕರಾದ ತಿಮ್ಮಣ್ಣ ಭಟ್ಟ, ಜಯಾ ಗೌಡ, ವಿನಾಯಕ ಶೆಟ್ಟಿ, ಮಾರುತಿ ನಾಯ್ಕ ಲಕ್ಷ್ಮೇಶ್ವರ, ನಮಿತಾ ಬಾಂದೇಕರ, ಶಿಬಿರದ ನಿರ್ದೇಶಕರಾದ ನಾಗರಾಜ ಮಳವಳ್ಳಿ ನೀನಾಸಂ ಅವರು ಹಾಜರಿದ್ದರು. ಸಂತೆ ಪೂರ್ವದಲ್ಲಿ ಮಕ್ಕಳು ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದರು.