ಅಂಕೋಲಾ: ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಯಲ್ಲಾಪುರ -ಅಂಕೋಲಾ ಮಧ್ಯೆ ಶುಕ್ರವಾರ ಮಧ್ಯಾಹ್ನ ಅರಬೈಲ್ ಘಟ್ಟದ ಬಳಿ ಹಾಲು ತುಂಬಿ ಸಾಗುತ್ತಿದ್ದ ಟ್ಯಾಂಕರ್ ಲಾರಿ ಪಲ್ಟಿಯಾಗಿ ರಸ್ತೆಯಲ್ಲಿ ಹಾಲಿನ ಹೊಳೆ ಹರಿದು ಹೋಗಿರುವ ಘಟನೆ ನಡೆದಿದ್ದು, ಟ್ಯಾಂಕರ್ ನಿಂದ ಸೋರುತ್ತಿರುವ ಹಾಲು ಸಂಗ್ರಹಿಸಲು ಕೆಲವರು ಪಾತ್ರೆ, ಬಕೇಟ್ ತಂಬಿಗೆಗಳೊಂದಿಗೆ ಮುಗಿ ಬಿದ್ದಿರುವುದು ಕಂಡು ಬಂದಿದ್ದು ಸಿಕ್ಕಷ್ಟು ಹಾಲು ತುಂಬಿ ಹೋಗುತ್ತಿರುವ ದೃಶ್ಯಗಳು ಕಂಡು ಬಂದಿದೆ.
ಮಹಾರಾಷ್ಟ್ರದ ಕೋಲಾಪುರದಿಂದ ಕೇರಳಕ್ಕೆ ತೆರಳುತ್ತಿದ್ದ ಟ್ಯಾಂಕರ್ ಲಾರಿ ಇದಾಗಿತ್ತು. ಅರಬೈಲ್ ಘಟ್ಟದ ತಿರುವಿನಲ್ಲಿ ವಾಹನದ ಬ್ರೇಕ್ ಪೇಲ್ ಆಗಿರುವುದು ಅಪಘಾತಕ್ಕೆ ಕಾರಣವಾಗಿದ್ದು ಚಾಲಕನಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಪಲ್ಟಿಯಾದ ವಾಹನದ ಟ್ಯಾಂಕರ್ ನಿಂದ ಹಾಲು ರಸ್ತೆ ಮೇಲೆ ಹರಿದು ಹೋಗುತ್ತಿದ್ದು ಸುಮಾರು 20 ಸಾವಿರ ಲೀಟರ್ ಹಾಲು ರಸ್ತೆ ಪಾಲಾಗಿದೆ ಎನ್ನಲಾಗಿದೆ.