ಕಾರವಾರ: ನೌಕರಿ ಕೊಡಿಸುವ ನೆಪದಲ್ಲಿ ಸೀಬರ್ಡ್ ನೌಕಾನೆಲೆಯ ಅಧಿಕಾರಿಯ ಪತ್ನಿಗೇ 1.17 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿನ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನ್ಲೈನ್‌ನಲ್ಲಿ ಉದ್ಯೋಗ ಮಾಹಿತಿ ಹುಡುಕುತ್ತಿದ್ದ ವೇಳೆ ಸಿಕ್ಕ ‘ಶಾಪ್ಪೀ’ ಎಂಬ ಮೊಬೈಲ್ ಆ್ಯಪ್ ಅನ್ನು ಮಹಿಳೆ ಮೊದಲಿಗೆ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಅದರಲ್ಲಿ ಮನೆಯಿಂದಲೇ ಕೆಲಸ ಮಾಡಿ ಹಣ ಸಂಪಾದಿಸಿ ಎಂದಿದ್ದ ಜಾಹೀರಾತೊಂದರ ಮೊಬೈಲ್ ಸಂಖ್ಯೆಗೆ ವಾಟ್ಸಪ್‌ನಲ್ಲಿ ಸಂಪರ್ಕಿಸಿದಾಗ, ಮೊದಲು ಕಮಿಷನ್ ರೂಪದಲ್ಲಿ ಅಲ್ಪ ಮೊತ್ತದ ಹಣವನ್ನು ವಂಚಕರು ಆಕೆಗೆ ಪಾವತಿಸಿದ್ದಾರೆ.
ಹಣ ಸಿಕ್ಕ ಖುಷಿಯಲ್ಲಿದ್ದ ಮಹಿಳೆಗೆ ಕೆಲವು ಟಾಸ್ಕ್ಗಳನ್ನು ಪೂರ್ಣಗೊಳಿಸುವಂತೆ ವಂಚಕರು ಸೂಚಿಸಿದ್ದು, ಅದು ಪೂರ್ಣಗೊಂಡ ಬಳಿಕ ಹಣ ಪಾವತಿಸಲು ತಾಂತ್ರಿಕ ಸಮಸ್ಯೆಯಾಗುತ್ತಿದೆಯೆಂದು ಕ್ಯೂಆರ್ ಕೋಡ್ ಕಳುಹಿಸಿ, ಅದನ್ನು ಸ್ಕ್ಯಾನ್ ಮಾಡಲು ತಿಳಿಸಿದ್ದಾರೆ. ಅದನ್ನು ಸ್ಕ್ಯಾನ್ ಮಾಡಿದ ನೌಕಾನೆಲೆಯ ಅಧಿಕಾರಿಯ ಪತ್ನಿಯ ಖಾತೆಯಿಂದ 1,17,600 ರೂ. ಬೇರೊಂದು ಖಾತೆಗೆ ವರ್ಗಾವಣೆ ಆಗಿದೆ. ಸದ್ಯ ಸೈಬರ್ ಠಾಣೆಗೆ ದೂರು ನೀಡಲಾಗಿದ್ದು, ತನಿಖೆ ಮುಂದುವರಿದಿದೆ.