ಕುಮಟಾ : ಮೂರೂರು ಎಂಬುದು ನೂರೂರಿಗೆ ಸಮನಾಗಿದ್ದು, ಮೂರೂರಿನಲ್ಲಿ ಪ್ರತಿಭಾನ್ವಿತರು, ವಿದ್ಯಾವಂತರು ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಊರು ಎಂಬುದು ಸಂತೋಷದ ವಿಚಾರ ಇಂತಹ ಮೂರೂರಿನ ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಏ.27 ರಿಂದ ಮೇ 1 ರವರೆಗೆ ಸಂಜೆ 5.30 ರಿಂದ ‘ಸಾಗರ ಸೇತು’ ರಾಮಕಥಾ ಕಾರ್ಯಕ್ರಮ ನಡೆಯಲಿದೆ ಎಂದು ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ತಿಳಿಸಿದರು. ಅವರು ಮೂರೂರು ಪ್ರಗತಿ ವಿದ್ಯಾಲಯದ ಪದವಿಪೂರ್ವ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಹೆಚ್ಚಿನ ಸಂಖ್ಯೆಯ ಭಕ್ತರು ಪ್ರತಿಭಾನ್ವಿತರನ್ನು ಹೊಂದಿದ ಮೂರೂರಿನಲ್ಲಿ ರಾಮಕಥೆ ನಡೆಯುತ್ತಿರುವುದು ಸಂತಸದ ವಿಷಯ. 2012 ರಲ್ಲಿ ಇದೇ ಸ್ಥಳದಲ್ಲಿ ಯಶಸ್ವಿಯಾಗಿ ರಾಮಕಥೆ ಅತ್ಯಂತ ವಿಜೃಂಭಣೆಯಿಂದ ನಡೆದಿತ್ತು. 10 ವರ್ಷದ ಬಳಿಕ ಮತ್ತೊಮ್ಮೆ ಈ ಸ್ಥಳದಲ್ಲಿ ರಾಮಕಥೆ ಜರುಗಲಿದ್ದು, ವಾಲ್ಮೀಕಿ ರಾಮಾಯಣದ ರಾಮ ಸೇತು ನಿರ್ಮಾಣದ ಕಥೆಯನ್ನು ಆಧರಿಸಿ ರಾಮಕಥೆ ನಡೆಯಲಿದೆ. ರಾಮ ಸೇತುವೆ ನಿರ್ಮಾಣವಾದ ಬಗೆ, ದಕ್ಷಿಣ ದಿಕ್ಕಿಗೆ ಪ್ರಭು ಶ್ರೀರಾಮನ ದಂಡಯಾತ್ರೆಯಿಂದ ಪ್ರಾರಂಭವಾಗಿ ಲಂಕೆಗೆ ರಾಮನ ಪಾದಾರ್ಪಣೆಯವರೆಗೆ ರಾಮಕಥೆ ನಡೆಯಲಿದೆ. ಭಕ್ತ ಸಮೂಹ ಸಾಗರ ಸೇತು ರಾಮಕಥೆಯನ್ನು ಕೇಳಿ, ಜೀವನ ಪಾವನಗೊಳಿಸಿಕೊಳ್ಳಬೇಕು ಎಂದ ಸ್ವಾಮೀಜಿ, ಶ್ರೀಮಠದ ಅಂಗ ಸಂಸ್ಥೆಯಾದ ವಿದ್ಯಾನಿಕೇತನ ಸಂಸ್ಥೆಯ ಆವಾರದಲ್ಲಿ ಏ.27 ರಿಂದ 5 ದಿನಗಳ ಕಾಲ ಸಾಗರ ಸೇತು ಪ್ರವಚನದೊಂದಿಗೆ ವಿವಿಧ ಗೀತ-ನೃತ್ಯ-ಚಿತ್ರ, ದೃಶ್ಯ-ಶ್ರಾವ್ಯ ಕಲಾ ಮಾಧ್ಯಮಗಳ ಮೂಲಕ ವಾಲ್ಮೀಕಿ ರಾಮಾಯಣದ ಪುನರವತರಣ ನಡೆಯಲಿದೆ.
ಈ ಎಲ್ಲ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿದೆ ಎಂದು ಶುಭ ಹಾರೈಸಿದರು. ಪ್ರಗತಿ ವಿದ್ಯಾಲಯದಲ್ಲಿ ಪದವಿಪೂರ್ವ ಕಾಲೇಜು ಆರಂಭಿಸಬೇಕು ಎಂದು ಹಲವು ವರ್ಷಗಳಿಂದ ಕನಸು ಹೊಂದಲಾಗಿತ್ತು. ಕಾಲೇಜು ಆರಂಭಿಸಲು ರಾಜ್ಯ ಸರ್ಕಾರದ ಅನುಮತಿ ದೊರೆತಿದ್ದು, ಬರುವ ಶೈಕ್ಷಣಿಕ ವರ್ಷದಿಂದ 11 ಮತ್ತು 12 ನೇ ತರಗತಿ ಆರಂಭಿಸಲಾಗುತ್ತದೆ. ಸಂಸ್ಥೆಯ ಆವಾರದಲ್ಲಿ ರಾಮಕಥೆ ನಡೆಯುವುದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳಿಗೆ ಮತ್ತಷ್ಟು ಶ್ರೇಯಸ್ಸು ದೊರೆಯುತ್ತದೆ. ಅಲ್ಲದೇ ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂದು ನುಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಆರ್.ಜಿ ಭಟ್ಟ, ಸುಬ್ರಾಯ ಭಟ್ಟ ಹಟ್ಟಿಕೇರಿ, ರಾಜಾರಾಮ ಭಟ್ಟ, ರವೀಂದ್ರ ಭಟ್ಟ ಸೂರಿ, ಎಸ್.ಶಂಭು ಭಟ್ಟ ಕಡತೋಕಾ, ಅರುಣ ಹೆಗಡೆ, ಎಸ್.ಎಂ.ಭಟ್ಟ ಕತಗಾಲ ಸೇರಿದಂತೆ
ಮತ್ತಿತರರು ಉಪಸ್ಥಿತರಿದ್ದರು.