ಹೊನ್ನಾವರ : ತಾಲೂಕಿನ ಪ್ರತಿಷ್ಠಿತ ಎಮ್‌ ಪಿ ಇ ಸೊಸೈಟಿಯ ಎಸ್‌ ಡಿ ಎಮ್‌ ಪದವಿ ಮಹಾವಿದ್ಯಾಲಯದಲ್ಲಿಕಳೆದ ಮೂರು ದಶಕಗಳಿಂದ ಸಂಗೀತ ಪ್ರಾಧ್ಯಾಪಕರಾಗಿ, ಸಂಗೀತ ವಿಭಾಗದ ಮುಖ್ಯಸ್ಥರಾಗಿ ಸೇವಾ ನಿವೃತ್ತಿ ಹೊಂದಿದ್ದ ಡಾ.ಅಶೋಕ ಹುಗ್ಗಣ್ಣವರು ಹಿಂದುಸ್ತಾನೀ ಗಾಯಕರಾಗಿಯೂ ನಾಡಿನಾದ್ಯಂತ ಮನೆಮಾತಾದವರು. ಊರೂರಿನಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಲ್ಲದೇ ,ಹತ್ತಾರು ಶಿಷ್ಯರಿಗೆ ತಮ್ಮ ಮನೆಯಲ್ಲೇ ಸಂಗೀತದ ಪಾಠ ಹೇಳಿ, ಆ ಶಿಷ್ಯರೆಲ್ಲ ಇಂದು ಹಿಂದುಸ್ತಾನೀ ಸಂಗೀತದ ಪ್ರತಿಭಾವಂತ ಗಾಯಕರಾಗಿ ರೂಪುಗೊಳ್ಳುವಂತೆ ಮಾಡಿದವರು. ದೇಶ-ವಿದೇಶಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ,ಪ್ರಾತ್ಯಕ್ಷಿಕೆಗಳನ್ನು ನೀಡಿ ಹೊನ್ನಾವರದ ಸಾಂಸ್ಕೃತಿಕ ರಾಯಭಾರಿಯಾದವರು. ಇವರ ಸಾಧನೆಯ ನೆಲವಾದ ಹೊನ್ನಾವರದ ಶ್ರೀಯುತರಿಗೆ ನಾಗರಿಕ ಸಮ್ಮಾನವನ್ನು ನಡೆಸಲು ಡಾ. ಅಶೋಕ ಹುಗ್ಗಣ್ಣವರ ಅಭಿನಂದನಾ ಸಮಿತಿಯನ್ನು ರಚಿಸಿಕೊಂಡು ದಿನಾಂಕ ೧ ಮೇ ೨೦೨೨ ಭಾನುವಾರ ಹೊನ್ನಾವರದ ಹವ್ಯಕದಲ್ಲಿ ಅಭಿನಂದನಾ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ.

RELATED ARTICLES  ಈಜಲು ಹೋದಾಗ ನೀರಿನಲ್ಲಿ ಮುಳುಗಿ ಆರ್.ಎಸ್.ಎಸ್ ಕಾರ್ಯಕರ್ತ ಸಾವು.

ಅಂದು ಅಪರಾಹ್ನ ಮೂರರಿಂದ ಐದು ಗಂಟೆಯವರೆಗೆ ಡಾ.ಹುಗ್ಗಣ್ಣವರ ಶಿಷ್ಯವೃಂದದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.ಸಾಯಂಕಾಲ ೫:೩೦ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು,ಪ್ರಸಿದ್ಧ ಗಾಯಕರಾದ ಡಾ. ನಾಗರಾಜರಾವ್ ಹವಾಲ್ದಾರ ಬೆಂಗಳೂರು ಉದ್ಘಾಟಕರಾಗಿ ಆಗಮಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಇನ್ನೋರ್ವ ಪ್ರಸಿದ್ಧ ಗಾಯಕ ಪಂ. ಪರಮೇಶ್ವರ ಹೆಗಡೆ ,ಕಲ್ಭಾಗ ಭಾಗವಹಿಸಲಿದ್ದಾರೆ.ಇದೇ ಸಂದರ್ಭದಲ್ಲಿ ನಾಗರಾಜ ಹೆಗಡೆ,ಅಪಗಾಲ ಅವರ ಪ್ರಧಾನ ಸಂಪಾದಕತ್ವದಲ್ಲಿ ಡಾ.ಅಶೋಕ ಹುಗ್ಗಣ್ಣವರ ಕುರಿತಾದ ಅಭಿನಂದನಾ ಗ್ರಂಥ ʼಚಂದ್ರಪ್ರಭಾʼ ವನ್ನು ಮಾಜಿ ವಿಧಾನ ಪರಿಷತ್‌ ಸದಸ್ಯ ಹುಬ್ಬಳ್ಳಿಯ ಶ್ರೀ ಮೋಹನ ಲಿಂಬಿಕಾಯಿ ಅವರು ಬಿಡುಗಡೆ ಮಾಡಲಿದ್ದಾರೆ.ನಂತರ ಡಾ.ಹುಗ್ಗಣ್ಣ ದಂಪತಿಗಳಿಗೆ ವೇದಿಕೆಯ ಗಣ್ಯರಿಂದ ನಾಗರಿಕ ಸಮ್ಮಾನ ನಡೆಯಲಿದ್ದು,ಖ್ಯಾತ ಸಾಹಿತಿ ಡಾ. ಶ್ರೀಧರ ಬಳಗಾರ ಅಭಿನಂದನಾ ನುಡಿಗಳನ್ನು ಆಡಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗೀತ ಕಲಾವಿದ,ಸಂಘಟಕ ಪ್ರೊ.ಎಸ್‌.ಶಂಭು ಭಟ್ಟ ವಹಿಸಲಿದ್ದಾರೆ.ಅಭಿನಂದನಾ ಸಮಿತಿಯ ಅಧ್ಯಕ್ಷ ಶ್ರೀ ಆರ್‌.ಜಿ ಭಟ್ಟ,ಕುಮಟಾ ಕಾರ್ಯಾಧ್ಯಕ್ಷ ಶ್ರೀ ಕೃಷ್ಣಮೂರ್ತಿ ಭಟ್ಟ,ಶಿವಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದು,ಸಭಾ ಕಾರ್ಯಕ್ಗರಮದ ನಂತರ ಢಾ. ನಾಗರಾಜರಾವ್‌ ಹವಾಲ್ದಾರ ಹಾಗೂ ಡಾ.ಅಶೋಕ ಹುಗ್ಗಣ್ಣವರ ಸಂಗೀತ ಕಾರ್ಯಕ್ರಮ ಇದೇ ವೇದಿಕೆಯಲ್ಲಿ ನಡೆಯಲಿದೆ.

RELATED ARTICLES  ಹೆಚ್ಚಲಿದೆ ಪತಂಜಲಿಯ ಆನ್ ಲೈನ್ ವಹಿವಾಟು.

ಕಾರ್ಯಕ್ರಮದಲ್ಲಿ ಹೊನ್ನಾವರ ಸುತ್ತಲಿನ ಸಂಗೀತಪ್ರೇಮಿಗಳು ,ಸಂಗೀತದ ವಿದ್ಯಾರ್ಥಿಗಳು ,ಶಿಷ್ಯರು,ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಕೃಷ್ಣಮೂರ್ತಿ ಭಟ್ಟ,ಶಿವಾನಿ ಹಾಗೂ ಕಾರ್ಯದರ್ಶಿ ಶ್ರೀ ವಿಶ್ವೇಶ್ವರ ಭಟ್ಟ ತಿಳಿಸಿದ್ದಾರೆ.