ಹೊನ್ನಾವರ: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸೋಣ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾಡಳಿತ, ತಾಲೂಕಾ ಪಂಚಾಯತ್,ತಾಲೂಕಾ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ 75ನೇ ವರ್ಷದ ಸ್ವಾತಂತ್ಯೋತ್ಸವ ಅಮೃತಮಹೋತ್ಸವದ ಅಂಗವಾಗಿ ಶುಕ್ರವಾರ ತಾಲ್ಲೂಕಾ ಆಸ್ಪತ್ರೆ ಯಲ್ಲಿ ಆಯೋಜಿಸಲಾದ ತಾಲ್ಲೂಕು ಮಟ್ಟದ ಆರೋಗ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಸಮಸ್ಯೆಯಾಗಿದೆ. ಅತಿಯಾದ ಆಧುನಿಕತೆಯಿಂದ ತಿನ್ನುವ ಆಹಾರವು ಕೂಡ ರಾಸಾಯಾಣಿಕಯುಕ್ತವಾಗಿದ್ದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುವಂತಾಗಿದೆ. ಕಲುಷಿತವಾತಾವರಣದಿಂದಾಗಿ ಅತೀ ಹೆಚ್ಚು ಆರೋಗ್ಯ ಸಮಸ್ಯೆ ಕಾಡುವಂತಾಗಿದೆ. ಹೀಗಾಗಿ ಸಾರ್ವಜನಿಕರು ಯಾವುದೇ ರೋಗ ರುಜಿನಗಳು ಬಂದಾಗ ನಿರ್ಲಕ್ಷಿಸುವುದು ಸರಿಯಲ್ಲ ತಕ್ಷಣ ವ್ಯೆದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಕಳೆದ ಎರಡು ವರ್ಷ ದಿಂದ ಕಾಡುತ್ತಿರುವ ಕರೋನಾ ಮಹಾ ಮಾರಿ ಏನೆಲ್ಲಾ ಅವಾಂತರ ಮಾಡಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ.ಹೀಗಾಗಿ ಯಾವುದೇ ಕಾಯಿಲೆ ಬರುವ ಮೊದಲು ಮುಂಜಾಗ್ರತೆ ವಹಿಸಬೇಕು. ಈ ದಿಸೆಯಲ್ಲಿ ತಾಲ್ಲೂಕಾಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ತೊಂದರೆಗಳಾದಲ್ಲಿ ತಮ್ಮ ಗಮನಕ್ಕೆ ತರಬಹುದಾಗಿದೆ ಎಂದರು.
ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ್ ಮೇಸ್ತ, ಉಪಾಧ್ಯಕ್ಷೆ ನಿಶಾ ಶೇಟ್,ತಾಲೂಕಾ ವ್ಯೆದ್ಯಾಧಿಕಾರಿ ಉಷಾ ಹಾಸ್ಯಗಾರ, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ರಾಜೇಶ್ ಕಿಣಿ ಇನ್ನಿತರರು ಇದ್ದರು.