ರಾಮಲೀಲಾ ಮೈದಾನ, ಮೂರೂರು (ಕುಮಟಾ): ಪ್ರತಿಯೊಬ್ಬರ ಅಂತರಾಳದಲ್ಲಿ ಆತ್ಮರೂಪದ ರಾಮನಿದ್ದಾನೆ. ನಮ್ಮ ಹೃದಯವೇ ರಾಮಮಂದಿರ ಎಂಬ ಸತ್ಯವನ್ನು ಅರಿತುಕೊಳ್ಳುವುದೇ ಬದುಕಿನ ಧರ್ಮ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ‘ರಾಮಸೇತು’ ರಾಮಕಥಾ ಸರಣಿಯ ನಾಲ್ಕನೇ ದಿನದ ಪ್ರವಚನ ಅನುಗ್ರಹಿಸಿದ ಅವರು, ಲಂಕಾ ಸಾಮ್ರಾಜ್ಯ ತೊರೆದ ಬಳಿಕ ಆತ್ಮದಲ್ಲಿರುವ ರಾಮನಷ್ಟೇ ವಿಭೀಷಣನ ಆಸ್ತಿ. ವಿಭೀಷಣನ ಭವಿಷ್ಯದ ಬದುಕು ಅಮೂರ್ತವಾಗಿತ್ತು. ಅಮೂರ್ತದಿಂದ ರಾಮಮೂರ್ತಿಯನ್ನು ಕಂಡುಕೊಂಡಿದ್ದರಿಂದಲೇ ವಿಭೀಷಣನ ಮುಂದಿನ ಹಾಸಿ ಸ್ಪಷ್ಟವಾಯಿತು. ಈ ಅರಿವೇ ಮುಂದೆ ವಿಭೀಷಣನಿಗೆ ಲಂಕಾ ಪದವಿ ದೊರಕಿಸಿಕೊಟ್ಟು, ಧರ್ಮಸಾಮ್ರಾಜ್ಯ ಸ್ಥಾಪನೆಯಾಗಲು ಕಾರಣವಾಯಿತು ಎಂದು ವಿಶ್ಲೇಷಿಸಿದರು.
ಸೀತೆಯನ್ನು ರಾಮನಿಗೆ ಒಪ್ಪಿಸೋಣ ಎಂಬ ಧರ್ಮಸಮ್ಮತ ಸಲಹೆಯನ್ನು ನೀಡಿದ್ದಕ್ಕೆ ರಾವಣನ ಕೋಪಕ್ಕೆ ತುತ್ತಾಗಿ ವಿಭೀಷಣನ ಸಚಿವ ಪದವಿ ಹೋಯಿತು; ಎಲ್ಲಿ ಸತ್ಕಾರ್ಯಗಳನ್ನು ಮಾಡಿದ್ದನ್ನೂ ಅಲ್ಲಿಂದನೇ ಉಚ್ಚಾಟಿಸಲ್ಪಟ್ಟ. ವಿಭೀಷಣನ ಪತ್ನಿ- ಮಗಳು ಕೂಡಾ ಆತನ ಧರ್ಮಕಾರ್ಯದಲ್ಲಿ ಭಾಗಿಯಾಗಿದ್ದರು. ಆದರೂ ಉಟ್ಟಬಟ್ಟೆಯಲ್ಲೇ ಲಂಕೆ ತೊರೆಯುವ ಸ್ಥಿತಿ ಬಂತು ಎಂದು ವಿವರಿಸಿದರು. ಮನುಷ್ಯ ಮುಂದಿನದ್ದು ಆಶ್ರಯಿಸಿ ಹಿಂದಿನದ್ದು ಬಿಡಬೇಕು. ಆದರೆ ವಿಭೀಷಣ ಮುಂದಿನ ಸ್ಥಾನದ ಕಲ್ಪನೆಯೂ ಇಲ್ಲದೇ ಲಂಕೆಯ ಪದವಿ ತ್ಯಜಿಸಿ ಲಂಕೆ ತೊರೆಯುತ್ತಾನೆ. ಆಗ ಆತನ ಮುಂದಿದ್ದುದು ಸಾಗರ ಮಾತ್ರ. ಆದರೆ ಆತನ ಸುಕೃತದಿಂದ ಆತನಿಗೆ ದೊರಕಿದ್ದು ರಾಮನ ಕರುಣಾ ಸಾಗರ ಎಂದು ಬಣ್ಣಿಸಿದರು.

RELATED ARTICLES  ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೋವಿಡ್ ಕಾಟ : ಶಿರಸಿಯಲ್ಲೂ ಕೆಲ ವಿದ್ಯಾರ್ಥಿಗಳಿಗೆ ಕೊರೋನಾ..!


ಇದು ರಾಜಕಾರಣ, ಉದ್ಯೋಗ ಎಲ್ಲಕ್ಕೂ ಅನ್ವಯಿಸುತ್ತದೆ. ರಾಜಕಾರಣಿಗಳು ಪಕ್ಷಾಂತರ ಮಾಡುವ ಮುನ್ನ ಹೊಸ ಪಕ್ಷದಲ್ಲಿ ಸ್ಥಾನದ ಭರವಸೆ ಪಡೆದಿರುತ್ತಾರೆ. ಅಂತೆಯೇ ಉದ್ಯೋಗಿಗಳು ಕೂಡಾ ಹಿಂದಿನ ಉದ್ಯೋಗ ಬಿಡುವ ಮುನ್ನ ಬೇರೆ ಉದ್ಯೋಗದ ಭರವಸೆ ಪಡೆದಿರುತ್ತಾರೆ. ವಾಸ್ತವವಾಗಿ ರಾವಣ ತನ್ನ ದುಷ್ಕøತ್ಯದಿಂದಾಗಿ ಅವಸಾನವಾಗುವುದು ತಿಳಿದು, ಮುಂದೆ ಇಡೀ ಲಂಕೆಯ ಸಾಮ್ರಾಜ್ಯದ ಅಧಿಪತಿಯಾಗುವ ಅವಕಾಶ ವಿಭೀಷಣನಿಗೆ ಇತ್ತು. ಆದರೆ ವಿಭೀಷಣ, ರಾಮ ಸೇನೆಯ ಜತೆ ಯಾವ ಮಾತುಕತೆ ನಡೆಸುವ ಮುನ್ನವೇ ಭವಿಷ್ಯ ಯೋಚಿಸದೆಯೇ ಲಂಕೆ ತೊರೆಯುವ ನಿರ್ಧಾರಕ್ಕೆ ಬಂದ ಎಂದು ಹೇಳಿದರು.


ಸುಗ್ರೀವನೇ ಮೊದಲಾದ ಕಪಿಸೈನ್ಯದ ಮುಖಂಡರು ವಿಭೀಷಣನನ್ನು ಸಂಶಯದಿಂದ ನೋಡುವಂತಾದಾಗ ವಿಭೀಷಣ ಸಂಪೂರ್ಣ ಶರಣಾಗತಿಯಿಂದ ತನ್ನ ಉದ್ದೇಶವನ್ನು ಉಚ್ಚಸ್ವರದಿಂದ ಸ್ಪಷ್ಟವಾಗಿ ರಾಮನಿಗೂ ಕೇಳುವಂತೆ ಹೇಳಿದ. ಜಗತ್ತಿನ ಯಾವ ಜೀವವಾದರೂ ರಾಮನಿಗೆ ಶರಣಾದರೆ ಆತ ಇಲ್ಲ ಎನ್ನುವವನಲ್ಲ; ದೂರ ತಳ್ಳುವವನಲ್ಲ. ಸರ್ವರಿಗೂ ಅಭಯ ಕೊಡುವಾತ ರಾಮ. ಇದಕ್ಕೆ ಯಾವ ಜಾತಿ, ಕುಲದ ಬೇಧ ಇಲ್ಲ ಎಂಬ ಅಚಲ ನಂಬಿಕೆ ಆತನನ್ನು ರಕ್ಷಿಸಿತು ಎಂದು ವಿವರಿಸಿದರು.

RELATED ARTICLES  ಬೆಂಕಿಗೆ ಆಹುತಿಯಾತ್ತು ಅಡಕೆ ತೋಟ: ಸುಮಾರು 20 ಲಕ್ಷ ರೂಪಾಯಿ ಹಾನಿ.


ವಿದ್ವಾನ್ ಸತ್ಯನಾರಾಯಣ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತ ರಚನೆಕಾರರಾದ ಡಾ.ಗಜಾನನ ಶರ್ಮಾ, ಕಥಾಸಿದ್ಧತೆಯ ಸತ್ಯನಾರಾಯಣ ಶರ್ಮಾ ಮತ್ತು ಸುರೇಶ್ ಅಡಗೋಡಿ ಉಪಸ್ಥಿತರಿದ್ದರು. ಗಾಯನದಲ್ಲಿ ಶ್ರೀಪಾದ ಭಟ್ ಕಡತೋಕ, ಶಂಕರಿಮೂರ್ತಿ ಬಾಳಿಲ, ರಘುನಂದನ ಬೇರ್ಕಡವು, ಸಾಕೇತ್ ಶರ್ಮಾ, ದೀಪಿಕಾ ಭಟ್, ಪೂಜಾ ಭಟ್, ಮೃದಂಗದಲ್ಲಿ ಗಣೇಶ್ ಭಾಗ್ವತ್ ಗುಂಡ್ಕಲ್, ಸಿತಾರದಲ್ಲಿ ಸುಬ್ರಹ್ಮಣ್ಯ ಹೆಗಡೆ, ಕೊಳಲಿನಲ್ಲಿ ನಿರಂಜನ ಹೆಗಡೆ, ಹಾರ್ಮೋನಿಯಂನಲ್ಲಿ ಪ್ರಜ್ಞಾಲೀಲಾ, ಚಿತ್ರಕಲೆಯಲ್ಲಿ ನೀರ್ನಳ್ಳಿ ಗಣಪತಿ ಸಹಕರಿಸಿದರು. ರೂಪಕವನ್ನು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ನಿರ್ದೇಶಿಸಿದರು. ರಾಮಕಥಾ ನಿರ್ವಹಣಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.