ಕುಮಟಾ: ಸಾರಿಗೆ ಸಿಬ್ಬಂದಿಗಳ ವೇತನ ಹೆಚ್ಚಿಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿದ್ದು, ಶೀಘ್ರದಲ್ಲಿ ಆ ಪ್ರಯತ್ನ ನೆರವೇರಲಿದೆ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು. ಕೋವಿಡ್ ಕಾರಣದಿಂದ ವಿವಿಧೆಡೆ ವರ್ಗಾವಣೆ ಆದ ಸಿಬ್ಬಂದಿಗಳನ್ನು ಮಾತೃ ಘಟಕಕ್ಕೆ ಮರಳಿ ತರಲಾಗುವುದು ಎಂದು ಹೇಳಿದರು. ಅವರು ಕುಮಟಾದಲ್ಲಿ ಬುಧವಾರ ನೂತನ ಬಸ್ ಡಿಪೋ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಈಗಾಗಲೇ ಇರುವ ಬಸ್ ಗಳು ತೀರಾ ಹಳೆಯದಾಗಿದ್ದು ಇದರ ಪರಿಶೀಲನೆ ನಡೆಸಲಾಗಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ನಾಲ್ಕರಿಂದ ಐದು ಸಾವಿರ ನೂತನ ಬಸ್ ಗಳನ್ನು ಖರೀದಿ ಮಾಡುವ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿದ್ದೇನೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಕ್ಕೆ ಸಮಪ್ರಮಾಣವಾಗಿ ಬಸ್ ಗಳ ಹಂಚಿಕೆ ಮಾಡುತ್ತಿದ್ದು ಪ್ರಯಾಣಿಕರು ಸಾರಿಗೆ ಸಂಸ್ಥೆಯನ್ನೇ ಹೆಚ್ಚೆಚ್ಚು ಬಳಕೆ ಮಾಡುವ ಮೂಲಕ ನಷ್ಟವಾಗುವುದನ್ನು ತಡೆಯಬೇಕು , ಲಾಭದಾಯಕ ಎನಿಸುವಂತೆ ಮಾಡುವುದು ನಿಮ್ಮೆಲ್ಲರ ಕೈಯಲ್ಲಿದೆ ಎಂದರು.
150 ಕೋಟಿ ರು. ನಿವೃತ್ತಿ ವೇತನ ಬಾಕಿಯಿದ್ದು, ಶೀಘ್ರ ಬಿಡುಗಡೆ ಮಾಡುವ ಚಿಂತನೆ ನಮಗಿದೆ. ರಾಜ್ಯದ ನಾಲ್ಕು ವಿಭಾಗಗಳಲ್ಲಿ 45 ಸಾವಿರ ಬಸ್ ಗಳಿದ್ದು, ಹಳೆಯ ಬಸ್ ಗಳ ಬದಲಿಗೆ ಎಲೆಕ್ಟ್ರಿಕ್ ಬಸ್ ಗಳನ್ನು ನೀಡುವ ಯೋಜನೆ ಹಮ್ಮಿಕೊಂಡಿದ್ದೇವೆ. ಮೆಕ್ಯಾನಿಕ್ ಗಳಿಗೆ ಹೊಸ ತಂತ್ರಜ್ಞಾನ ಅಳವಡಿಕೆ ಮಾಡಲಾಗುವುದು ಎಂದು ಹೇಳಿದರು.
ಶಾಸಕ ದಿನಕರ ಶೆಟ್ಟಿ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು ವಿವಿಧ ಯೋಜನೆಗಳ ಮಂಜೂರಿಗೆ ನಮ್ಮನ್ನು ಒತ್ತಾಯಿಸಿ ಇಲ್ಲಿನ ಜನರಿಗೆ ವಿಶೇಷ ಕೊಡುಗೆಗಳನ್ನ ನೀಡುವಲ್ಲಿ ಸಫಲರಾಗಿದ್ದಾರೆ. ಅವರ ಜನಪರ ಕಾಳಜಿಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು ಎಂದು ಸಂತಸದಿಂದ ಹೇಳಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ನೂತನ ಡಿಪೋ ನಿರ್ಮಾಣಕ್ಕೆ 5 ಕೋಟಿ ರು. ಅನುದಾನ ತರಲಾಗಿದ್ದು ಟೆಂಡರ್ ಕೂಡ ಮುಗಿದಿದೆ. ಅನೇಕ ಕಾಮಗಾರಿಗಳನ್ನು ನನ್ನ ಅವಧಿಯಲ್ಲೇ ಶಂಕುಸ್ಥಾಪನೆ ಜೊತೆಗೆ ಉದ್ಘಾಟನೆ ಮಾಡಿದ ಹೆಮ್ಮೆ ನನಗಿದೆ. ಜೊತೆಗೆ ಹೆಚ್ಚಿನ ಸಚಿವರು ಬಿಜೆಪಿ ಆಡಳಿತದಲ್ಲಿದ್ದಾಗಲೆ ನಮ್ಮ ಭಾಗಕ್ಕೆ ಭೇಟಿ ನೀಡಿದ್ದು, ರಾಜ್ಯದ ಅಭಿವೃದ್ಧಿಗೆ ನೀಡುವ ಆದ್ಯತೆಗೆ ಇದು ಸಾಕ್ಷಿಯಾಗಿದೆ ಎಂದ ಅವರು ಸಚಿವ ಶ್ರೀರಾಮುಲು ಕಾರ್ಮಿಕರ ಬಗ್ಗೆ ಹೆಚ್ಚು ಒಲವು ಉಳ್ಳವರು ಎಂಬುದನ್ನೂ ಶ್ಲಾಘಿಸಿದರು.
ನೂತನ ಡಿಪೋ ನಿರ್ಮಾಣಕ್ಕೆ ಶಂಕುಸ್ಥಾಪನೆಗೆ ಅನುದಾನ ತರುವಲ್ಲಿ ಶಾಸಕ ದಿನಕರ ಶೆಟ್ಟಿ ಪ್ರಯತ್ನ ದೊಡ್ಡದಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜಿಪಿ ಪ್ರಮುಖರಾದ ಡಾ.ಜಿ.ಜಿ.ಹೆಗಡೆ, ನಾಗರಾಜ ನಾಯಕ ತೊರ್ಕೆ, ಪುರಸಭೆ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.