ಭಟ್ಕಳ- ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯು ಇಲ್ಲಿನ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಾಹಿತಿಗಳಾದ ಡಾ.ಆರ್.ವಿ.ಸರಾಫ್, ದೀಪ ಬೆಳಗಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಾಹಿತ್ಯ ಪರಿಷತ್ತು ಕನ್ನಡ ನಾಡು ನುಡಿ ಪರಂಪರೆಯಯನ್ನು ಉಳಿಸಿ ಬೆಳೆಸಿ ವಿಶ್ವದಾದ್ಯಂತ ಪಸರಿಸುವ ಕಾರ್ಯವನ್ನು ಮಾಡುತ್ತ ಬಂದಿದೆ.ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ೧೯೧೫ರಲ್ಲಿ ಸ್ಥಾಪನೆಗೊಂಡು ಸಾಹಿತ್ಯಿಕ ಕಾರ್ಯಕ್ರಮಗಳ ಜೊತೆಗೆ,ಪುಸ್ತಕ ಪ್ರಕಟಣೆ, ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುತ್ತ ಕನ್ನಡ ನಾಡು ನುಡಿಯ ಕಾರ್ಯವನ್ನು ನಿರವಹಿಸುತ್ತ ಬಂದಿದೆ. ನಾವೆಲ್ಲರೂ ಕೂಡ ಪರಿಷತ್ತಿನೊಂದಿಗೆ ನಾಡು ನುಡಿಗೆ ನಮ್ಮಿಂದಾದ ಕೊಡುಗೆ ನೀಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ಏಕೀಕರಣ ಕ್ಕಿಂತ ಪೂರ್ವದಲ್ಲೇ ಸ್ಥಾಪನೆಗೊಂಡು ಕನ್ನಡಿಗರನ್ನು ಸಂಘಟಿಸಿ ಏಕೀಕರಣಕ್ಕೆ ಸಾಂಸ್ಥಿಕ ಸ್ವರೂಪವನ್ನು ನೀಡಿದೆ. ಕನ್ನಡ ನಾಡು ನುಡಿಯನ್ನು ಕಟ್ಟಿ ಬೆಳೆಸುವುದನ್ನೇ ಧ್ಯೇಯವನ್ನಾಗಿರಿಸಿಕೊಂಡು ಕಾರ್ಯನಿರವಹಿಸುತ್ತಿರುವ ಕನ್ನಡಿಗರೆಲ್ಲರ ಹೆಮ್ಮೆಯ ಸಂಸ್ಥೆಯಾಗಿದೆ ಎಂದರು. ಸಾಹಿತಿ ಹಾಗೂ ಶಿಕ್ಷಕಿ ಪೂರ್ಣಿಮಾ ಕರ್ಕಿಕರ್ ಕನ್ನಡ ಮನಸ್ಸುಗಳ ಮೇಲೆ ಸಾಹಿತ್ಯ ಪರಿಷತ್ತು ಬೀರಿದ ಪ್ರಭಾವ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಪರಿಷತ್ತಿನಸ್ಥಾಪನೆಯ ಹಿನ್ನೆಲೆ, ನಾಡು ನುಡಿಹೆ ಸಂಬಂಧಿಸಿದಂತೆ ನಿರ್ವಹಿಸುತ್ತಿರುವ ಕಾರ್ಯಗಳ ಕುರಿತು ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಾಹಿತಿ ನಾರಾಯಣ ಯಾಜಿ ಮಾತನಾಡಿದರಲ್ಲದೇ ಅವರ ಹಾಗೂ ಶ್ರೀಮತಿ ಜಯಾ ಯಾಜಿ ಅವರ ಕೃತಿಗಳನ್ನು ಸಿದ್ಧಾರ್ಥ ಸಂಸ್ಥೆಯ ಗ್ರಂಥಾಲಯಕ್ಕೆ ನೀಡಿದರು. ಸಿದ್ಧಾರ್ಥ ಪ. ಪೂ. ಕಾಲೇಜಿನ ಪ್ರಾಂಶುಪಾಲರಾದ ಅರ್ಚನಾ ಯು. ಮಾತನಾಡಿ ಸಾಹಿತ್ಯದ ಓದು, ಬರವಣಿಗೆಯ ಹವ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕೆಂದರಲ್ಲದೇ ಕನ್ನಡ ಭಾಷಾ ಪ್ರಭುತ್ವವನ್ನು ಗಳಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕಸಾಪ ಸದಸ್ಯ ಪಾಂಡುರಂಗ ಅಳ್ವೆಗದ್ದೆ ಎಲ್ಲರನ್ನು ಸ್ವಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಜರಿದ್ದರು.