ಕುಮಟಾ: ದ್ವೇಷ, ಅಸೂಯೆ, ಭಿನ್ನಾಭಿಪ್ರಾಯಗಳು ದೂರಾಗಲು ಕ್ರೀಡಾಕೂಟಗಳು ಸಹಕಾರಿಯಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಶುಕ್ರವಾರ ಕತಗಾಲ ಗ್ರಾಮದಲ್ಲಿ ಗಜು ಪೈ ಅಭಿಮಾನಿಗಳ ಬಳಗ ಆಯೋಜಿಸಿದ ದ್ವಿತೀಯ ವರ್ಷದ ಪೈ ಬ್ರದರ್ಸ್ ಟ್ರೋಫಿ ಕ್ರೀಡಾಕೂಟ ಉದ್ಘಾಟಿಸಿ ಅಭಿಪ್ರಾಯಪಟ್ಟರು.
ರಾಜಕೀಯ ಕ್ಷೇತ್ರದಲ್ಲಿ ಜನಪರ ಚಟುವಟಿಕೆಗಳ ಮೂಲಕ ಮನ್ನಣೆ ಗಳಿಸಿರುವ ಗಜಾನನ ಪೈ ಅವರ ಅಭಿಮಾನಿ ಬಳಗವು ಸಮಾಜದಲ್ಲಿ ಸಾಮರಸ್ಯ, ಬಾಂಧವ್ಯ ಹೆಚ್ಚಿಸುವ ಕಾರ್ಯ ಮಾಡುತ್ತಿದೆ. ಕ್ರೀಡೆ ಮೂಲಕ ಸಕಾರಾತ್ಮಕ ಸಂದೇಶ ನೀಡುತ್ತಿರುವುದು ಶ್ಲಾಘನೀಯವಾದುದು ಎಂದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ ಮಾತನಾಡಿ, ಜಿಲ್ಲಾಮಟ್ಟದ ಟೂರ್ನಿಗಳು ನಮ್ಮ ಗ್ರಾಮದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ದಿನಕರ ಶೆಟ್ಟಿ ಅವರ ನೇತೃತ್ವದಲ್ಲಿ ಮುಂದಿನ ವರ್ಷ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ ಆಯೋಜಿಸುವ ಚಿಂತನೆ ನಡೆಸಿದ್ದೇವೆ. ಎಲ್ಲರ ಸಹಕಾರ ಬೇಕಿದೆ ಎಂದರು.
ಶಿಕ್ಷಕ ವಿನಾಯಕ ಭಟ್ಟ ಕ್ರೀಡಾಂಗಣ ಉದ್ಘಾಟಿಸಿ ಕತಗಾಲ ಭಾಗದಲ್ಲಿ ಸುಸಜ್ಜಿತ ಕ್ರಿಕೆಟ್ ಮೈದಾನದ ಅಗತ್ಯತೆ ಬಗ್ಗೆ ಶಾಸಕರ ಬಳಿ ಮನವಿ ಮಾಡಿದರು. ಗ್ರಾ.ಪಂ.ಉಪಾಧ್ಯಕ್ಷ ಶ್ರೀಧರ ಪೈ ಧ್ವಜಾರೋಹಣ ನೆರವೇರಿಸಿದರು. ಮಂಡಲಾಧ್ಯಕ್ಷ ಹೇಮಂತ್ ಕುಮಾರ್ ಗಾಂವಕರ, ಮಹೇಶ ದೇಶಭಂಡಾರಿ, ಶ್ರೀಕಾಂತ್ ಜೈನ್, ಸುರೇಶ ಭಟ್ಟ, ಯೋಗೇಶ ಪಟಗಾರ, ಉದಯಕುಮಾರ್ ಜೈನ್ ಮುಂತಾದವರು ಇದ್ದರು.