ಕುಮಟಾ: ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದವರು ವಿಶೇಷ ಪ್ರಯೋಜನ ಪಡೆದುಕೊಳ್ಳಲು ಬಿಜೆಪಿ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಸಮುದಾಯ ಭವನ ನಿರ್ಮಾಣ ಕೂಡ ಒಳಗೊಂಡಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಶುಕ್ರವಾರ ಮಿರ್ಜಾನ್ ಪಂಚಾಯ್ತಿ ಸಮೀಪ 50 ಲಕ್ಷ ರೂ. ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ನಿರ್ಮಾಣವಾದ ಡಾ. ಅಂಬೇಡ್ಕರ ಭವನ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕಟ್ಟಡವನ್ನು ಈಗಾಗಲೇ ಗ್ರಾಮ ಪಂಚಾಯ್ತಿಗೆ ಹಸ್ತಾಂತರ ಮಾಡಲಾಗಿದ್ದು ಸ್ವಚ್ಛತೆ ಸೇರಿದಂತೆ ಸಂಪೂರ್ಣ ನಿರ್ವಹಣೆ ಜವಾಬ್ದಾರಿಯನ್ನು ವಹಿಸಬೇಕಾಗುತ್ತದೆ. ಇದು ಕೇವಲ ಹಿಂದುಳಿದ ವರ್ಗದವರಿಗೆ ಮಾತ್ರ ಸೀಮಿತವಾಗಿರದೆ ಪ್ರತಿಯೊಬ್ಬರೂ ಪ್ರಯೋಜನ ಪಡೆಯುವಂತಾಗಬೇಕು ಎಂದು ಸೂಚನೆ ನೀಡಿದರು.
ನೆರೆ ಹಾಗೂ ಕೋವಿಡ್ ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು. ಆ ಸಮಸ್ಯೆ ನಡುವೆಯೂ ಅಭಿವೃಧ್ಧಿ ಕುಂಠಿತವಾಗಲು ಆಸ್ಪದ ನೀಡದೇ ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನವನ್ನು ರಾಜ್ಯದೆಲ್ಲೆಡೆ ನೀಡಿದ್ದಾರೆ. ನಾಲ್ಕು ವರ್ಷದ ಅವಧಿಯಲ್ಲಿ ಶೇ.70 ರಿಂದ 80 ರಷ್ಟು ಅಭಿವೃದ್ಧಿ ಸಾಧಿಸುವಲ್ಲಿ ಸಫಲಾನಾಗಿದ್ದೇನೆ. ಕೆಲವು ವಿರೋಧಿಗಳು ಸ್ವಪ್ರಚಾರಕ್ಕೆ ಹಾಗೂ ರಾಜಕೀಯ ಲಾಭಕ್ಕೆ ಅರ್ಥವಿಲ್ಲದ ಹೋರಾಟ, ಪ್ರತಿಭಟನೆಗಳನ್ನು ಮಾಡುತ್ತಿರುವುದು ಕಂಡು ಬರುತ್ತಿದೆ. ಕುಮಟಾದಲ್ಲಿ ಟ್ರಾಮಾ ಸೆಂಟರ್ ಇಲ್ಲ ಎಂದು ಹೋರಾಟ ಮಾಡುವವರಿಗೆ ಜಿಲ್ಲೆಯ ಬೇರೆ ತಾಲ್ಲೂಕುಗಳಲ್ಲೂ ಇದೇ ಸಮಸ್ಯೆ ಇರುವುದು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂತಹ ಆಸ್ಪತ್ರೆಗಳಲ್ಲಿ ನುರಿತ ವೈದ್ಯರ ಸಂಬಳ ಅಧಿಕ ಪ್ರಮಾಣದಲ್ಲಿದ್ದು ಸರ್ಕಾರ ಆ ಬೇಡಿಕೆ ಈಡೇರಿಸಿದರೂ ವೈದ್ಯರು ನಾನಾ ಕಾರಣಗಳಿಂದ ನಮ್ಮ ಜಿಲ್ಲೆಗೆ ಬರಲು ಹಿಂಜರಿಯುತ್ತಾರೆ. ಅವರ ಮಕ್ಕಳಿಗೆ ಬೇಕಾದ ಶಿಕ್ಷಣ ಹಾಗೂ ಜೀವನಶೈಲಿಗೆ ಪೂರಕ ವಾತಾವರಣ ನಮ್ಮ ಜಿಲ್ಲೆಯಲ್ಲಿ ಸಿಗದಿರುವುದೇ ಹಿನ್ನಡೆಯಾಗಿದೆ. ಶೈಕ್ಷಣಿಕವಾಗಿ ಪ್ರಬಲವಾಗಿರುವ ನಮ್ಮ ಜಿಲ್ಲೆಯಲ್ಲಿ ಅನೇಕ ದಶಕಗಳ ಆಡಳಿತ ನಡೆಸಿ ಮಂತ್ರಿಗಳಾಗಿದ್ದವರಿಂದ ಯೂನಿವರ್ಸಿಟಿಯನ್ನೂ ತರಲು ಸಾಧ್ಯವಾಗಿಲ್ಲ. ಇದು ದುರದೃಷ್ಟಕರ ಸಂಗತಿ ಎಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭಾರತಿ ಆಚಾರಿ ಸ್ವಾಗತಿಸಿ ವಂದಿಸಿದರು. ಮಿರ್ಜಾನ್ ಗ್ರಾ.ಪಂ.ಅಧ್ಯಕ್ಷ ಪರಮೇಶ್ವರ ಪಟಗಾರ, ಮಾಜಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಮುಕ್ರಿ, ಲ್ಯಾಂಡ್ ಆರ್ಮಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಸ್.ಎರ್.ಮೇಹರವಾಡಿ ಇದ್ದರು.