ಕುಮಟಾ: ತಾಲ್ಲೂಕಿನ ವಿವಿಧೆಡೆ ಶಾಸಕ ದಿನಕರ ಶೆಟ್ಟಿ ಅವರು ಸೋಮವಾರ ಒಟ್ಟು 1 ಕೋಟಿ 80 ಲಕ್ಷ ರೂ.ಗಳ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ದೇವಗಿರಿ ಗ್ರಾ.ಪಂ. ವ್ಯಾಪ್ತಿಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಠದ ಕಾಂಕ್ರೀಟ್ ರಸ್ತೆ, ಕಲಭಾಗ ಗ್ರಾ.ಪಂ. ವ್ಯಾಪ್ತಿಯಲ್ಲಿ 20 ಲಕ್ಷ ರೂ. ವೆಚ್ಚದ ಅಳ್ವೇಕೊಡಿ-ವಿದ್ಯಾನಗರ ರಸ್ತೆ, ತಲಾ 10 ಲಕ್ಷ ರೂ. ಮೊತ್ತದಲ್ಲಿ ಅಳ್ವೆದಂಡಿಯಿಂದ ಕಿರಣ್ ಶೇಟ್ ಮನೆವರೆಗಿನ ರಸ್ತೆ, ಗಾವಡಿಕೊಪ್ಪ ರಸ್ತೆ, ರೇಮಂಡ್ ಅಳ್ವೆಕೊಡಿ ಮನೆವರೆಗಿನ ರಸ್ತೆ ಹಾಗೂ ಕಲಭಾಗದ ಹರಿಕಂತ್ರ ಕೇರಿಯಿಂದ ಪಟಗಾರಕೇರಿ ರಸ್ತೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು.
ದೀವಗಿ ಗ್ರಾ.ಪಂ.ನಲ್ಲಿ 20 ಲಕ್ಷ ರೂ. ವೆಚ್ಚದ ಶಿಳೆಕುಂದಳ ದೇವಸ್ಥಾನಕ್ಕೆ ಹೋಗುವ ರಸ್ತೆ, 30 ಲಕ್ಷ ರೂ. ವೆಚ್ಚದಲ್ಲಿ ಶಿರಸಿ ಮುಖ್ಯರಸ್ತೆಯಿಂದ ಬೆಳ್ಳೆ ಗೌಡರಕೇರಿವರೆಗಿನ ರಸ್ತೆ, ತಲಾ 10 ಲಕ್ಷ ರೂ.ಗಳಲ್ಲಿ ನವಗ್ರಾಮದಿಂದ ಸ್ಮಶಾನಕ್ಕೆ ಹೋಗುವ ರಸ್ತೆ ಹಾಗೂ ಮಣಕೋಣ ಸುಗ್ಗಿಕಟ್ಟೆಯಿಂದ ಬಂಗಾರಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿತು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ರಾಜ್ಯ ಸರ್ಕಾರವು ಕ್ಷೇತ್ರಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನಗಳನ್ನು ನೀಡುತ್ತಿದ್ದು, ಈಗಾಗಲೇ 4 ಕೋಟಿ ರೂ.ಗಳ ಶಂಕುಸ್ಥಾಪನೆ ಕಾರ್ಯ ಮುಗಿದಿದೆ. ಇನ್ನೂ 9 ಕೋಟಿ ರೂ.ಗಳ ಕಾಮಗಾರಿಗಳು ಶೀಘ್ರವೇ ವಿವಿಧೆಡೆ ಭೂಮಿ ಪೂಜೆ ಕಾಣಲಿದೆ. ಲ್ಯಾಂಡ್ ಆರ್ಮಿ ಇಂಜಿನಿಯರ್ ಗಳಿಗೆ ಎಲ್ಲಾ ಕಾಮಗಾರಿಗಳ ಗುಣಮಟ್ಟ ಕಾಪಾಡಿಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು.