ಕುಮಟಾ: ಪಟ್ಟಣದ ತಾಲ್ಲೂಕಾಸ್ಪತ್ರೆಗೆ ಗುರುವಾರ ಸಂಜೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಅವರು ನಿರ್ಮಾಣ ಹಂತದಲ್ಲಿರುವ ಐಸಿಯೂ ಘಟಕದ ಕಾಮಗಾರಿ ಪರಿಶೀಲನೆ ನಡೆಸಿದರು. ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ ನಾಯ್ಕ ಅವರು ನೂತನ ಘಟಕದ ಮಾಹಿತಿ ನೀಡಿ, ಎರಡು ಕೊಠಡಿಗಳಲ್ಲಿ ಒಟ್ಟು 14 ಬೆಡ್ ಗಳಿದ್ದು ಬಹುತೇಕ ಕಾಮಗಾರಿಗಳು ಮುಗಿದಿವೆ. ಆಸ್ಪತ್ರೆಯಲ್ಲಿ ಲಭ್ಯವಿರುವ ವೈದ್ಯರು ಮತ್ತು ಚಿಕಿತ್ಸೆಗೆ ಅನುಗುಣವಾಗಿ ಐಸಿಯೂ ಬಳಕೆ ಮಾಡುತ್ತೇವೆ. ಅಗತ್ಯ ಬಿದ್ದರೆ ರೋಗಿಗಳನ್ನು ದೂರದ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡುತ್ತೇವೆ ಎಂದರು.
ಡಯಾಲಿಸಿಸ್ ಘಟಕ, ಹೆರಿಗೆ ವಾರ್ಡ್ ಸೇರಿದಂತೆ ವಿವಿಧ ವಾರ್ಡ್ ಗಳಲ್ಲಿ ದಾಖಲಾದ ರೋಗಿಗಳ ಜೊತೆ ಚರ್ಚೆ ನಡೆಸಿ ಚಿಕಿತ್ಸೆ ಗುಣಮಟ್ಟದ ಮಾಹಿತಿ ಪಡೆದುಕೊಂಡರು. ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದ ಅವರು, ಧೂಳು, ಜೇಡರಬಲೆ ಮುಂತಾದವುಗಳ ಸ್ವಚ್ಛತೆಗೂ ಸೂಕ್ಷ್ಮವಹಿಸಬೇಕು ಎಂದರು. ಆಂಬ್ಯುಲೆನ್ಸ್ ಗಳ ಕಾರ್ಯ ನಿರ್ವಹಣೆ, ನರ್ಸ್ ಗಳು ಕಾರ್ಯನಿರ್ವಹಿಸುವ ಸಮಯ, ಕುಂದುಕೊರತೆಗಳ ಬಗ್ಗೆ ಆಡಳಿತಾಧಿಕಾರಿಯೊಂದಿಗೆ ಮಾತನಾಡಿದರು.