ಕುಮಟಾ: 180 ಕಿ.ಮೀ. ವ್ಯಾಪ್ತಿಯ ಕರಾವಳಿಯಲ್ಲಿ ಬಹುಪಾಲು ಉತ್ತರಕನ್ನಡಕ್ಕೆ ಒಳಪಟ್ಟರೂ ನಮ್ಮ ಜಿಲ್ಲೆಗಿಂತ ಉಡುಪಿ, ಮಂಗಳೂರು ಜಿಲ್ಲೆಗಳ ಮೀನುಗಾರರು ಹೆಚ್ಚು ಅಭಿವೃದ್ಧಿ ಹೊಂದಿದ್ದಾರೆ. ವ್ಯವಸ್ಥಿತ ಬಂದರಿನ ಕೊರತೆಯೇ ನಮಗೆ ಹಿನ್ನಡೆಯಾಗಿದೆ. ಹೋರಾಟದ ಮನೋಭಾವ ನಮ್ಮ ಭಾಗದವರಲ್ಲಿ ಕಡಿಮೆಯಿದ್ದು, ಮೀನುಗಾರಿಕೆ ವೃತ್ತಿ ನಂಬಿದವರ ಕಲ್ಯಾಣಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಗೋಕರ್ಣದ ನಾಡುಮಾಸ್ಕೇರಿ ಗ್ರಾ.ಪಂ.ನ ಗಂಗೆಕೊಳ್ಳದಲ್ಲಿ ಗಂಗಾವಳಿ ಮೀನುಗಾರರ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಮೀನುಗಾರರು ನಮ್ಮ ನಾಡಿನ ಸಂಸ್ಕೃತಿ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ವಿದ್ಯಾವಂತರ ಸಂಖ್ಯೆ ಜಾಸ್ತಿಯಾಗಬೇಕಾದ ಅವಶ್ಯಕತೆ ಇದೆ. ಒಂದು ಕೋಟಿ ರೂ.ಗಳಿಗಿಂತ ಹೆಚ್ಚಿನ ಅನುದಾನ ಈ ಭಾಗಕ್ಕೆ ತಂದಿದ್ದು ಆಶ್ರಯ ಮನೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೀಡುವ ಚಿಂತನೆಯಿದೆ ಎಂದರು.
ಮಧ್ಯವರ್ತಿಗಳಿಗೆ ನಮ್ಮ ಸರ್ಕಾರ ಕಡಿವಾಣ ಹಾಕಿದ್ದು ಅಭಿವೃದ್ಧಿ ಕಾರ್ಯಗಳ ಜೊತೆಗೆ ಸರ್ಕಾರದ ಹಣ ಪೋಲಾಗಲು ಅವಕಾಶ ನೀಡುತ್ತಿಲ್ಲ. ಹಾಗಾಗಿ ವಿವಿಧ ಪಕ್ಷದವರು ವಿರೋಧಿಸಲು ವಿಷಯ ಸಿಗದೇ ಕೈಕೈ ಹಿಸುಕಿಕೊಳ್ಳುವಂತಾಗಿದೆ. ಮೀನುಗಾರ ಸಮುದಾಯದ ಅಭಿವೃದ್ಧಿಗೆ ಇನ್ನಷ್ಟು ವಿಶೇಷ ಯೋಜನೆಗಳನ್ನು ತರಲು ಸಚಿವರು ಮತ್ತು ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.
ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಮದನ ಜನಾರ್ದನ ತಾಂಡೆಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಈಶ್ವರ ತಾಂಡೆಲ್, ನಾಡುಮಾಸ್ಕೇರಿ ಗ್ರಾ.ಪಂ.ಅಧ್ಯಕ್ಷೆ ಧನಶ್ರೀ ಅಂಕೊಲೇಕರ್, ಗ್ರಾ.ಪಂ.ಸದಸ್ಯರಾದ ರಾಜೇಶ್, ದಯಾನಂದ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ನಾಗಭೂಷಣ ಕಲ್ಮನೆ, ಸಂದೀಪ ತಾಂಡೇಲ್, ನಾಗರಾಜ ತಾಂಡೆಲ್, ಚಂದ್ರಶೇಖರ ನಾಯಕ ಮುಂತಾದವರು ಇದ್ದರು.