ಕುಮಟಾ: ತಾಲೂಕಿನ ಹೊಲನಗದ್ದೆಯ ಹವ್ಯಕ ಸಭಾಭವನದಲ್ಲಿ ಹವ್ಯಕ ಸಮಾಜ ಸೇವಾ ಸಂಘದ ವಾರ್ಷಿಕ ಸ್ನೇಹ ಕೂಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಭಾರಿ ಹಾಗೂ ಪ್ರಗತಿ ಟ್ಯುಟೋರಿಯಲ್ಸ್ ಮುಖ್ಯಸ್ಥ ಪ್ರೊ.ಎಂ.ಜಿ.ಭಟ್ಟ ಮಾತನಾಡಿ, ಧರ್ಮ ಮತ್ತು ಕರ್ಮದ ಫಲವಾಗಿ ಭರತ ಭೂಮಿಯ ಹಿಂದೂ ಧರ್ಮದಲ್ಲಿ ಜನಿಸಿರುವುದು ನಮ್ಮ ಸೌಭಾಗ್ಯ. ನಮ್ಮ ಹವ್ಯಕ ಸಂಸ್ಕೃತಿಯನ್ನು ಮುಂದಿನ ಯುವ ಪೀಳಿಗೆಗೆ ಹಸ್ತಾಂತರಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಭಿಪ್ರಾಯಪಟ್ಟರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭವ್ಯ ಭಾರತ ವಿಶ್ವಗುರುವಾಗುತ್ತಿದ್ದು, ಹಿಂದೂ ಧರ್ಮ ಜಗತ್ತಿನ ಶ್ರೇಷ್ಟ ಧರ್ಮ ಎಂದು ವಿದೇಶಿಗರು ಒಪ್ಪಿಕೊಂಡು, ನಮ್ಮ ಧರ್ಮದ ಸಂಸ್ಕೃತಿ, ಆಚಾರ-ವಿಚಾರದೆಡೆಗೆ ಆಕರ್ಷಿತರಾಗುತ್ತಿದ್ದಾರೆ ಎಂದರು. ಹವ್ಯಕ ಸಮುದಾಯ ವೇಗವಾಗಿ ಅವನತಿಯತ್ತ ಸಾಗುತ್ತಿರುವುದು ವಿಷಾದನೀಯ. ಜಗತ್ತಿಗೆ ಹವ್ಯಕ ಸಮಾಜ ಜ್ಞಾನ ಭಂಡಾರವನ್ನು ನೀಡಿರುವುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕಾಗಿದೆ. ಹವ್ಯಕ ಸಂಪ್ರದಾಯದ ಸಂಸ್ಕಾರ, ಸಂಸ್ಕೃತಿಯನ್ನು ಯುವಕರಿಗೆ ತಿಳಿಸಿಕೊಡಬೇಕು ಎಂದರು. ಇಂದಿನ ಯುವಕರು ಉದ್ಯೋಗದ ಕಾರಣದಿಂದ ಹೊರ ಪ್ರದೇಶಗಳಲ್ಲಿರುವುದರಿಂದ ಎಷ್ಟೋ ಹಳ್ಳಿಗಳು ವೃದ್ದಾಶ್ರಮವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ನೀಡುವುದರ ಜತೆ ವೇದಿಕೆ ಕಲ್ಪಿಸಬೇಕು. ಆಗ ಸಮಾಜ ಮತ್ತಷ್ಟು ಅಭಿವೃದ್ಧಿಯತ್ತ ಸಾಗುತ್ತದೆ. ಜಾತಿಗಳ ಮಧ್ಯೆ ವೈಷಮ್ಯ ಬೆಳೆದು ಧರ್ಮಕ್ಕೆ ಸಂಕಟ ತಂದೊಡ್ಡಬಹುದು. ಜಾತಿಗಳಿಂದ ಹೊರ ಬಂದು ನಾವೆಲ್ಲರೂ ತಾಯಿ ಭಾರತಾಂಬೆಯ ಮಕ್ಕಳು ಎಂಬ ಭಾವನೆಯಿಂದ ಹಿಂದೂ ಧರ್ಮದ ರಕ್ಷಣೆಗಾಗಿ ಪಣತೊಡಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹವ್ಯಕ ಸಮಾಜ ಸೇವಾ ಸಂಘದ ಅಧ್ಯಕ್ಷ ಆರ್.ಎನ್.ಹೆಗಡೆ ಮಾತನಾಡಿ, ಇತರ ಸಮಾಜದವರೊಂದಿಗೆ ಹವ್ಯಕ ಸಮಾಜ ಸೌಹಾರ್ದತೆ ಸಾಧಿಸಿದೆ. ಪ್ರತಿಭೆಗಳಿಗೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದೊರಕಿದಾಗ ಸಮಾಜವು ಅಭಿವೃದ್ಧಿಯತ್ತ ಸಾಗುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನ ಪಡೆದ ಹವ್ಯಕರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಎಂದ ಅವರು, ಹವ್ಯಕ ಸಭಾಭವನದ ಅಡುಗೆ ಮನೆ ಶಿಥಿಲಗೊಂಡಿದ್ದು, ಅದನ್ನು ನವೀಕರಣಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ನಮ್ಮ ಸಮಾಜದವರ ಬೆಂಬಲ ಅತ್ಯಗತ್ಯ ಎಂದರು.
ತಹಸೀಲ್ದಾರ ಅಶೋಕ ಭಟ್ಟ ಮಾತನಾಡಿ, ಹವ್ಯಕರು ಸಮಾಜಕ್ಕೆ ಪೂರಕವಾದ ಕಾರ್ಯ ಮಾಡಿ, ಸಮಾಜದವರಿಗೆ ಆದರ್ಶರಾಗಬೇಕು. ಸದಾಚಾರ, ಸನ್ನಡತೆ ಪ್ರಾಮಾಣಿಕತೆ ಬೆಳೆಸಿಕೊಳ್ಳುವ ಮೂಲಕ ಇತರ ಸಮಾಜದವ ಮಧ್ಯೆ ಭಿನ್ನವಾಗಿ ಜೀವನ ನಡೆಸಬೇಕು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರ ಕಚೇರಿ ತಹಸೀಲ್ದಾರ ಅಶೋಕ ಭಟ್ಟ, ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಭಟ್ಟ, ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ಶಿಕ್ಷಣ ಇಲಾಖೆಯ ಜಿಲ್ಲಾ ಸಮನ್ವಯಾಧಿಕಾರಿ ಶ್ರೀಕಾಂತ ಹೆಗಡೆ, ನಿವೃತ್ತ ಅಧಿಕಾರಿಗಳಾದ ಗಣೇಶ ಭಟ್ಟ, ರೇಣುಕಾ ಭಟ್ಟ, ಶಿವಾಜಿ ಶ್ಯಾನಭಾಗ, ನಿವೃತ್ತ ಶಿಕ್ಷಕ ಶ್ರೀಪಾದ ಭಟ್ಟ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶೈಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಣೀತ ರವಿರಾಜ ಕಡ್ಲೆ, ಹಾಗೂ ಇತರರನ್ನು ಪುರಸ್ಕರಿಸಲಾಯಿತು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಮಹಾ ಪ್ರಬಂಧಕ ನಾರಾಯಣ ಯಾಜಿ, ವೇಣುಗೋಪಾಲ ಮದ್ಗುಣಿ, ಉದ್ಯವಿ ಮಂಜುನಾಥ ಭಟ್ಟ ಸುವರ್ಣಗದ್ದೆ ಮತ್ತಿತರರು ಉಪಸ್ಥಿತರಿದ್ದರು.