ಗೋಕರ್ಣ: ಸರ್ಕಾರಿ ಶಾಲೆಯೊಂದು 150 ವರ್ಷಗಳ ಸಂಭ್ರಮದಲ್ಲಿದೆ ಎಂಬುದು ನಾವೆಲ್ಲರೂ ಹೆಮ್ಮೆಪಡುವ ವಿಚಾರವಾಗಿದೆ. ನಾಡವರ ಸಮಾಜದ ಸಮನ್ವಯತೆ, ಸಹಬಾಳ್ವೆ ಕೂಡ ಇದಕ್ಕೆ ಕಾರಣ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಶನಿವಾರ ನಾಡವರ ಸಂಘ ಹಾಗೂ ಯುವಕ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ತೊರ್ಕೆ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉತ್ತರಕನ್ನಡ ಜಿಲ್ಲೆಗೆ ನಾಡವರ ಸಮುದಾಯದ ಕೊಡುಗೆ ಅಪಾರವಾಗಿದ್ದು, ಸಮಾಜದ ಏಳ್ಗೆಗೆ ಇವರು ಶ್ರಮಿಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಇವರು ಗುರುತಿಸಿಕೊಂಡಿದ್ದು ವೃತ್ತಿ, ಪ್ರವೃತ್ತಿಗಳಲ್ಲಿ ಸಾಧನೆಯ ಮೈಲಿಗಲ್ಲು ತಲುಪಿದ್ದಾರೆ. ಶಾಲೆಯ ಒಂದೂವರೆ ಶತಮಾನಗಳ ಇತಿಹಾಸ ಕೆದಕಿದರೆ ನಾಡವರಲ್ಲಿ ಇರುವ ಶಿಕ್ಷಣ ಪ್ರೇಮ ತಿಳಿಯುತ್ತದೆ ಎಂದು ತಿಳಿಸಿದರು.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.

ಶೈಕ್ಷಣಿಕವಾಗಿ ಜಿಲ್ಲೆ ಮಹತ್ತರ ಸ್ಥಾನ ಹೊಂದಿದ್ದು, ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಹೀಗಾಗಿ ಪಾಲಕರು ಕೂಡ ಖಾಸಗಿ ಶಾಲೆ ವ್ಯಾಮೋಹ ಬಿಟ್ಟು ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ವಿದ್ಯೆ ಕಲಿಸಬೇಕು. ಸರ್ಕಾರ ಕೂಡ ಆರೋಗ್ಯ ಮತ್ತು ಶಿಕ್ಷಣಕ್ಕೆ ಮೊದಲ ಪ್ರಾಶಸ್ತ್ಯ ನೀಡಿ ಯೋಜನೆಗಳನ್ನು ಕಲ್ಪಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಯಕ್ಷಗಾನ ಭಾಗವತಿಕೆ ಮೂಲಕ ಪ್ರಾರ್ಥನೆ, ಸ್ವಾಗತ ಗೀತೆಯನ್ನು ಹಾಡುವ ಮೂಲಕ ಕಲಾವಿದರು ಗಮನ ಸೆಳೆದರು. ಸುಭಾಸ್ ಖಾರೆಬೈಲ್ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಹಿತ್ತಲಮಕ್ಕಿ ಸ್ವಾಗತಿಸಿದರು.

RELATED ARTICLES  ಕುಮಟಾ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ನೂತನ ಕಟ್ಟಡ ಉದ್ಘಾಟನೆ.

ಗ್ರಾ.ಪಂ.ಅಧ್ಯಕ್ಷ ಆನಂದು ಕವರಿ, ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ, ರಾಮದಾಸ ಗಾಂವಕರ, ನಿವೃತ್ತ ಪೊಲೀಸ್ ಅಧಿಕಾರಿ ಪ್ರಮೋದ್ ರಾವ್, ಮೋಹನ ಕವರಿ, ಜೀವನ ಪಿ. ಗಾಂವಕರ, ಮಾಜಿ ಜಿ.ಪಂ ಸದಸ್ಯ ಪ್ರದೀಪ ನಾಯಕ ದೇವರಬಾವಿ, ನಾಗರಾಜ ನಾಯಕ ತೊರ್ಕೆ, ವಿನಯ ಗಾಂವಕರ, ನಾಗೇಂದ್ರ ನಾಯಕ, ದೇವರಾಜ ಗಾಂವಕರ, ನಿತ್ಯಾನಂದ ಹಿತ್ತಲಮಕ್ಕಿ, ಸುನೀಲ್ ಪೈ, ಮೋಹನ ನಾಯಕ, ವಕೀಲ ಪ್ರದೀಪ ನಾಯಕ, ಡಾ.ಜಗದೀಶ ನಾಯಕ, ಶಾಲಾ ಮುಖ್ಯ ಶಿಕ್ಷಕಿ ದೇವಿ ನಾಯಕ ಇದ್ದರು.