ಹೊನ್ನಾವರ: ಶಿಕ್ಷಣ ರಂಗ ವ್ಯಾಪಾರೀಕರಣವಾಗಿ ಬದಲಾಗುತ್ತಿರುವ ಆತಂಕಕಾರಿ ಸನ್ನಿವೇಶದಲ್ಲಿ ಸರ್ಕಾರದಿಂದ ಯಾವುದೇ ಅನುದಾನ ಪಡೆಯದೇ, ಫಲಾಪೇಕ್ಷೆ ಇಲ್ಲದೆ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿರುವುದು ಶ್ಲಾಘನೀಯ ಕಾರ್ಯ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ತಾಲ್ಲೂಕಿನ ಕವಲಕ್ಕಿಯ ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟ್ ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು. ಶಾಲೆಯ ಅಪೂರ್ವ ಸಾಧನೆಗೆ ಆಡಳಿತ ಮಂಡಳಿಯ ಆಸಕ್ತಿ, ಶಿಕ್ಷಕರ ಪರಿಶ್ರಮ ಕಾರಣವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಸವಾಲಿನ ಹಾದಿ ಸವೆಸುವುದು ಕಷ್ಟಕರವಾಗಿದ್ದು, ಓಟದಲ್ಲಿ ಒಂದೆಜ್ಜೆ ಮುಂದಿರುವ ವ್ಯಕ್ತಿ ಯಶಸ್ಸು ಸಾಧಿಸಲು ಸಾಧ್ಯವಿದೆ. ಶಿಕ್ಷಣ ರಂಗ ಸಾಕಷ್ಟು ಪ್ರಗತಿ ಹೊಂದಿದ್ದು ಇಂದಿನ ಕಲಿಕಾ ಶೈಲಿಗೆ ಮಕ್ಕಳು ಒಗ್ಗಿಕೊಳ್ಳಬೇಕು. ಗುರಿ ಮೇಲೆ ಕೇಂದ್ರೀಕರಿಸಿ ಸಾಗುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ಪ್ರತಿಭಾವಂತರ ಸಂಖ್ಯೆ ಹೆಚ್ಚಿದ್ದು, ಇಲ್ಲಿವರೆಗೆ ಆಡಳಿತ ನಡೆಸಿದವರು ಯೂನಿವರ್ಸಿಟಿ ನಿರ್ಮಿಸಲಿಲ್ಲ ಎಂಬುದು ವಿಷಾದಕರ. ಮೀನುಗಾರಿಕೆ ಕೂಡ ಕರಾವಳಿ ಭಾಗದ ಜನಜೀವನದ ಆಧಾರಸ್ತಂಭವಾಗಿದ್ದು ಮೀನುಗಾರಿಕೆ ಯೂನಿವರ್ಸಿಟಿಯನ್ನಾದರೂ ತರಬೇಕು ಎಂಬ ಪ್ರಯತ್ನದಲ್ಲಿದ್ದೇನೆ, ಈಗಾಗಲೇ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಟಾಪರ್ಸ್ ಆಗಿ ಸಾಧನೆ ಮಾಡಿದ ಶ್ರದ್ಧಾ ಭಟ್ಟ, ಸುಚಿತ್ರಾ ಭಟ್ಟ ಅವರನ್ನು ಹಾಗೂ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಉದ್ಯಮಿ ಸುಬ್ರಹ್ಮಣ್ಯ ಶಾಸ್ತ್ರಿ, ಗೋವಿಂದ ಭಟ್ಟ, ರಾಮ ಗೌಡ, ವಿ.ಜೆ.ಹೆಗಡೆ, ರೋಷನ್ ಶಾನಭಾಗ, ಎಂ.ಎಸ್.ಹೆಗಡೆ, ಶಿಕ್ಷಕಿ ವೈಲೆಟ್ ಇದ್ದರು. ಉಮೇಶ ಹೆಗಡೆ ಸ್ವಾಗತಿಸಿದರು. ಶಿಕ್ಷಕಿಯರಾದ ರೇಷ್ಮಾ, ಪ್ರತಿಮಾ, ಸಂಗೀತಾ ಕಾರ್ಯಕ್ರಮ ನಿರೂಪಿಸಿದರು.