ಶಿರಸಿ: ಕೇಂದ್ರ ಸರಕಾರ ವ್ಯಾಪ್ತಿಯ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡಿಸೇಲ್ ಮತ್ತು ನಿತ್ಯ ಉಪಯೋಗಿಸುವ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿರಸಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಶಿರಸಿ ನಗರದ ಹಳೆ ಬಸ್ ನಿಲ್ದಾಣ ಸರ್ಕಲ್ ಬಳಿ ಸೇರಿದ ಕಾಂಗ್ರೆಸ್ಸಿಗರು ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿದರು. ಶಿವಾಜಿಚೌಕ, ಬಿಡ್ಕಿಬೈಲ್‍ನಲ್ಲಿ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಪೆಟ್ರೋಲ್, ಡಿಸೆಲ್, ಗ್ಯಾಸ್ ಸಿಲೆಂಡರ್ ಹಾಗೂ ಜನಸಾಮಾನ್ಯರ ನಿತ್ಯೋಪಯೋಗಿ ವಸ್ತುಗಳ ದರ ಇಳಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಯುಪಿಎ ಸರ್ಕಾರದ ಅವಧಿಯಲ್ಲಿ ಸ್ಥಿರತೆಯಲ್ಲಿದ್ದ ಪೆಟ್ರೋಲ್, ಡಿಸೇಲ್, ಗ್ಯಾಸ ಮತ್ತಿತ್ತರ ವಸ್ತುಗಳ ದರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗಗನಕ್ಕೇರಿದೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳಾದ ರೈತರಿಗೆ ಯೋಜನೆ, ಯುವಜನತೆಗೆ ಉದ್ಯೋಗ ಭರವಸೆ ಎಲ್ಲವೂ ಬರವಸೆಯಾಗಿಯೇ ಉಳಿದಿವೆ. ಮೋದಿ ನೇತ್ರತ್ವದ ಕೇಂದ್ರ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದ್ದು, ಜನ ರೋಸಿ ಹೋಗಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿದರೂ ಪೆಟ್ರೋಲ್, ಡಿಸೆಲ್ ದರ ಬೆಲೆ ಇಳಿಸಿಲ್ಲ. ರಾಜ್ಯ ಸರ್ಕಾರ ತೆರಿಗೆ ಕಡಿಮೆ ಮಾಡಿದರೂ ಸಹ ದರ ಕಡಿಮೆ ಆಗಿಲ್ಲ. ಜನಸಾಮಾನ್ಯರಿಗೆ ಹೊರೆಯಾಗುವ ಸರ್ಕಾರವಾಗಿದ್ದು, ಮುಂಬರುವ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ವೇಳೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜೋಯಿಡಾದ ಸದಾನಂದ ದಬ್ಗಾರ, ಯಲ್ಲಾಪುರ ಡಿ.ಎನ್.ಗಾಂವಕರ, ಮಂಕಿಯ ಚಂದ್ರಶೇಖರ ಗೌಡ, ಹೊನ್ನಾವರ ಜಗದದೀಪ ತೆಂಗೇರಿ, ಕುಮಟಾದ ವಿ.ಎಲ್.ನಾಯ್ಕ, ಅಂಕೋಲಾದ ಪಾಂಡುರಂಗ ಗೌಡ, ಭಟ್ಕಳದ ವಿಠಲ ನಾಯ್ಕ, ಬನವಾಸಿಯ ದ್ಯಾಮಣ್ಣ ದೊಡ್ಮನಿ, ಡಿಸಿಸಿ ಸದಸ್ಯರಾದ ಎಂ.ಆರ್.ನಾಯ್ಕ ದಾಂಡೇಲಿ, ಇತರರು ಉಪಸ್ಥಿತರಿದ್ದರು.

RELATED ARTICLES  ಮೊಬೈಲ್ ಬಳಕೆ ಬಗ್ಗೆ ಬುದ್ದಿವಾದ ಹೇಳಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.