ಕುಮಟಾ: ತಾಲ್ಲೂಕಿನ ತಂಡ್ರಕುಳಿಯಲ್ಲಿ ಸ್ಥಳೀಯರ ವಿರೋಧವಿದ್ದರೂ ನಡೆಸುತ್ತಿದ್ದ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಅವರ ಮಧ್ಯಸ್ಥಿಕೆಯಲ್ಲಿ ತಾತ್ಕಾಲಿಕ ತಡೆ ಬಿದ್ದಿದೆ. ಗುಡ್ಡ ತೆಗೆಯಲು ಸಾಲು ಸಾಲಾಗಿ ಈ ಭಾಗದಲ್ಲಿ ನಾಡಬಾಂಬ್ ಸ್ಫೋಟಿಸಿದ ಕಾರಣ ಭೂಮಿ ಸಡಿಲಗೊಂಡಿದ್ದು ಮಳೆಗಾಲದಲ್ಲಿ ಅತಿಯಾದ ಪ್ರಮಾಣದ ನೀರು ನಮ್ಮ ಮನೆಗಳಿಗೆ ನುಗ್ಗುತ್ತಿದೆ. ನದಿಪಾತ್ರದಲ್ಲಿ ವಾಸಿಸುವುದರಿಂದ ನೆರೆ ಕಾರಣದಿಂದಲೂ ಇಲ್ಲಿನ ಜನ ಪ್ರತಿ ವರ್ಷ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ನಮಗೆ ಸುರಕ್ಷಿತ ಸ್ಥಳದಲ್ಲಿ ನೆಲೆಯೂರಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಬಹುದಿನಗಳ ಬೇಡಿಕೆಯಾಗಿದೆ. ಆದರೆ ತಾಲೂಕಾಡಳಿತ ಇದುವರೆಗೂ ಸೂಕ್ತ ಸ್ಪಂದನೆ ನೀಡಿಲ್ಲ ಎಂದು ಗ್ರಾಮಸ್ಥರು ಶಾಸಕರ ಬಳಿ ಸಮಸ್ಯೆ ಹೇಳಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ದಿನಕರ ಶೆಟ್ಟಿ ಅವರು, ಐಆರ್.ಬಿ ಕಾಮಗಾರಿ ಕೂಡ ಅಗತ್ಯವಾಗಿದೆ. ಆದರೆ ಇಲ್ಲಿಯ ಜನರಿಗೆ ತೊಂದರೆ ಉಂಟಾಗಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿ ವಸತಿ ವ್ಯವಸ್ಥೆಗೆ ಪ್ರತ್ಯೇಕ ಸ್ಥಳದ ಬಗ್ಗೆ ಸ್ಥಳೀಯರ ಜೊತೆಗೆ ಚರ್ಚಿಸಿದರು. ಸಮೀಪದಲ್ಲಿ ಅರಣ್ಯ ಇಲಾಖೆ ಪ್ರದೇಶವಿದ್ದು ಆ ಜಾಗದಲ್ಲಿ ಸೂರು ಕಲ್ಪಿಸಿದರೂ ಅನುಕೂಲಕರ ಎಂದು ಗ್ರಾಮಸ್ಥರು ಮನವಿ ಮಾಡಿದರು.
ಸ್ಥಳದಿಂದಲೇ ಜಿಲ್ಲಾಧಿಕಾರಿ ಅವರಿಗೆ ಫೋನಾಯಿಸಿದ ಶಾಸಕರು ತಂಡ್ರಕುಳಿ ಭಾಗದ ಜನರ ಸಮಸ್ಯೆಯನ್ನು ಮನದಟ್ಟು ಮಾಡಿ ಅರಣ್ಯ ಇಲಾಖೆ ಜಾಗದಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮಾತನಾಡಿದರು. ನಿರ್ದಿಷ್ಟ ಜಾಗ ಸಿಗುವವರೆಗೆ ಕಾಮಗಾರಿಗೆ ತಾತ್ಕಾಲಿಕ ತಡೆ ನೀಡುವಂತೆ ಸೂಚಿಸಿದರು.

RELATED ARTICLES  ಪ್ರೀತಿಗೆ ಕಾಣಿಕೆಯಂತೆ ನಾಗರಾಜ ನಾಯಕ ತೊರ್ಕೆಯವರಿಗೆ ಸುಗ್ಗಿಯ ತುರಾಯಿರಿಸಿ ಆನಂದಿಸಿದ ಹಾಲಕ್ಕಿಗರು.


ಶಾಸಕರ ಮಧ್ಯಪ್ರವೇಶದಲ್ಲಿ ಕಾಮಗಾರಿ ನಿಲ್ಲುವ ಜೊತೆಗೆ ಜನರ ಅಸಮಾಧಾನಕ್ಕೆ ತೆರೆ ಬಿದ್ದಿತು. ಮಾತಿನ ಚಕಮಕಿ ಸೇರಿದಂತೆ ಇನ್ನಿತರ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಒದಗಿಸಿತ್ತು. ಕುಮಟಾ, ಹೊನ್ನಾವರ ಹಾಗೂ ಗೋಕರ್ಣ ಠಾಣೆಗಳ ಪೊಲೀಸ್ ಅಧಿಕಾರಿಗಳು ಇದ್ದರು.

RELATED ARTICLES  ಜೀವನದಲ್ಲಿ ಶಿಸ್ತು ಮತ್ತು ಸಮಯಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ : ವಿನಾಯಕ ಪ್ರಭು.