ಕುಮಟಾ: ಪಟ್ಟಣದ ಮೂರೂರು ಕ್ರಾಸ್ ಬಳಿ ನೂತನವಾಗಿ ನಿರ್ಮಾಣಗೊಂಡ ಯುಕೆ ಸೌಹಾರ್ದ ಕೋ ಆಪರೇಟಿವ್ ನ ಮೊಟ್ಟ ಮೊದಲ ಮಹಿಳಾ ಶಾಖೆಯ ನ್ನು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಮಹಿಳಾ ಸಬಲೀಕರಣದ ಮಾತು ಯುಕೆ ಸೌಹಾರ್ದ ಸಂಸ್ಥೆ ಮೂಲಕ ಕೃತಿಯಾಗಿ ಬದಲಾಗಿದೆ. ಸದಾ ವಿಶಿಷ್ಠ ಚಿಂತನೆಗಳನ್ನು ಬಯಸುವ ಪ್ರಮೋದ ಹೆಗಡೆ ಅವರ ಮಹಿಳಾ ಶಾಖೆಯ ಕಲ್ಪನೆ ಅತ್ಯಂತ ವಿಶೇಷತೆಯಿಂದ ಕೂಡಿದೆ. ಸ್ವ ಉದ್ಯೋಗದ ತುಡಿತ ಇರುವವರಿಗೆ ನೆರವಾಗಲಿದೆ ಎಂದರು.

ಡಾ.ಜಿ.ಜಿ ಹೆಗಡೆ ಮಾತನಾಡಿ ಸಾಮಾಜಿಕ ಬದ್ಧತೆ, ಪ್ರಾಮಾಣಿಕತೆ, ಪಾರದರ್ಶಕತೆ ಇದ್ದಲ್ಲಿ ಯಶಸ್ಸು ಸಾಧ್ಯವಿದೆ ಎನ್ನುವುದಕ್ಕೆ ಯುಕೆ ಸೌಹಾರ್ದ ಸಂಸ್ಥೆಯ ನಿದರ್ಶನವಾಗಿದ್ದು ಬ್ಯಾಂಕಿನ ಕಾರ್ಯ ಚಟುವಟಿಕೆಗಳಲ್ಲಿ ಮಹಿಳೆಯರೇ ಇದ್ದರೂ ಈಗಾಗಲೇ ಎರಡು ಕೋಟಿ ರೂ. ಬಂಡವಾಳ ಸಂಗ್ರಹ ಮಾಡಿರುವುದು ಸಿಬ್ಬಂದಿಗಳ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ ಎಂದು ಪ್ರಶಂಸಿಸಿದರು.

RELATED ARTICLES  ಅಡಿಕೆ ದಲಾಲರಾದ ನಾರಾಯಣ ಭಟ್ ನಿಧನ

ನಂತರ ಆಶೀರ್ವಚನ ನೀಡಿದ ರಾಘವೇಶ್ವರ ಶ್ರೀಗಳು ಸಹಕಾರ, ಸಹಯೋಗದೊಂದಿಗೆ ನಾವು ಯಶಸ್ಸಿನ ಗುರಿಯನ್ನು ಹುಡುಕಬೇಕು. ಇನ್ನೊಬ್ಬರನ್ನು ಪೀಡಿಸುವ ಗುಣ ಇರಬಾರದು. ಒಳಿತನ್ನು ಬಯಸಿ ಸತ್ಕಾರ್ಯ ಮಾಡುವ ವಿಚಾರಧಾರೆಗಳನ್ನು ಬೆಳೆಸಿಕೊಳ್ಳಬೇಕು. ಸಾತ್ವಿಕ ವ್ಯಕ್ತಿತ್ವ ಹೊಂದಿದ ವ್ಯಕ್ತಿಗಳಿಂದ ಸಮಾಜಕ್ಕೆ ಮಹತ್ವದ ಕೊಡುಗೆಗಳು ಸಿಗುತ್ತವೆ ಎಂದು ನುಡಿದರು.

ಸಂಸಾರ ನೌಕೆ ಸಾಗಿಸುವ ಸಾಮರ್ಥ್ಯ ಮಹಿಳೆಯರಲ್ಲಿ ಜಾಸ್ತಿಯಿದ್ದು, ಆಯವ್ಯಯಗಳ ವಿಷಯದಲ್ಲಿ ಸಮತೋಲನತೆ ಕಾಪಾಡಿಕೊಳ್ಳುವ ಶಕ್ತಿ ಹೆಣ್ಣಲ್ಲಿದೆ. ಅವರಿಗಾಗಿ ಇಂತಹ ಶಾಖೆ ತೆರೆದಿರುವುದು ಸಂತಸ ತಂದಿದೆ. ಸಂಸ್ಥೆಯು ಇನ್ನಷ್ಟು ಸಾಧನೆ ಮಾಡಿ ಬಹುಮುಖವಾಗಿ ಬೆಳೆಯಲಿ. ಶ್ರೀಮಂತ, ಸಮೃದ್ಧವಾಗಿ ಜನಮಾನಸದಲ್ಲಿ ನೆಲೆಯೂರಲಿ ಎಂದು ಶುಭಾಶೀರ್ವದಿಸಿದರು.

RELATED ARTICLES  ಇಂದಿನ(ದಿ-08/04/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ

ನಿರ್ದೇಶಕರಾದ ಎಂ.ಎಂ.ಹೆಗಡೆ ಸ್ವಾಗತಿಸಿದರು. ಬ್ಯಾಂಕ್ ಅಧ್ಯಕ್ಷರಾದ ಪ್ರಮೋದ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿಜಿ ಹೆಗಡೆ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕಿ ಸರಸ್ವತಿ ಎನ್. ರವಿ, ಕುಮಟಾ ರೋಟರಿ ಅಧ್ಯಕ್ಷೆ ನಮೃತಾ ಶಾನಭಾಗ, ಜ್ಯಾಸ್ಮಿನ್ ಎಫರಲ್ಸ್ ಕಂಪನಿಯ ನಿರ್ದೇಶಕಿ ಜಯಾ ವಿ. ಹೆಗಡೆ ಇದ್ದರು. ಶಿಕ್ಷಕ, ನಿರೂಪಕ ರವೀಂದ್ರ ಭಟ್ಟ ಸೂರಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.