ಕುಮಟಾ : ತಾಲೂಕಿನ ಅಘನಾಶಿನಿಯ ಮಾಸ್ತಿಕಟ್ಟೆ ಘಟ್ಟದ ಬಳಿ ಘಟ್ಟ ಏರುತ್ತಿದ್ದಾಗ ಹಿಮ್ಮುಖವಾಗಿ ಚಲಿಸಿ, ಮದುವೆ ಟೆಂಪೋವೊಂದು ಕಂದಕಕ್ಕೆ ಉರುಳಿ 20 ಮಂದಿಗೆ ಗಾಯವಾದ ಘಟನೆ ವರದಿಯಾಗಿದೆ.
ಕುಮಟಾದಲ್ಲಿ ನಡೆದ ಮದುವೆ ಮುಗಿಸಿ ಮನೆಗೆ ತೆರಳುತ್ತಿದ್ದ ವಧುವಿನ ಕಡೆಯ ಟೆಂಪೋ ಪಲ್ಟಿಯಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಇವರಲ್ಲಿ ಏಳೆಂಟು ಮಂದಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆ ಪಕ್ಕದ ಕಂದಕಕ್ಕೆ ಉರುಳಿ, ಈ ಅವಾಂತರ ಸಂಭವಿಸಿದೆ.
ಹೆಚ್ಚು ಗಾಯಗೊಂಡ ಪ್ರಯಾಣಿಕರಿಗೆ ಸೂಕ್ತ ಚಿಕಿತ್ಸೆ ಸಿಗುವ ತನಕ ಶಾಸಕ ದಿನಕರ ಶೆಟ್ಟಿ ದೇಖರಿಕೆ
ಕುಮಟಾ ತಾಲ್ಲೂಕಿನ ಅಘನಾಶಿನಿ ಬಳಿ ಮದುವೆ ಟೆಂಪೋ ಪಲ್ಟಿಯಾಗಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು ಅದೃಷ್ಟವಾತ್ ಪ್ರಾಣಾಪಾಯ ಸಂಭವಿಸಿಲ್ಲ. ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಅವರು ಅಪಘಾತಕ್ಕೊಳಗಾದ ಎಲ್ಲರ ಆರೋಗ್ಯ ವಿಚಾರಿಸಿ ಆಸ್ಪತ್ರೆಯ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ತಕ್ಷಣ ಚಿಕಿತ್ಸೆ ಕೊಡಿಸಲು ಸೂಚಿಸಿದರು. ಅಘನಾಶಿನಿಯ ತಿಮ್ಮಕ್ಕ ಹಮ್ಮು ಗೌಡ ಹಾಗೂ ಶಿರಸಿ ಮೂಲದ ನಿರ್ಮಲಾ ಗೌಡ ಅವರಿಗೆ ಸ್ವಲ್ಪ ಪ್ರಮಾಣದ ಗಂಭೀರ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕಾರವಾರಕ್ಕೆ ಕಳಿಸುವಲ್ಲಿ ಶಾಸಕರು ಮುತುವರ್ಜಿ ವಹಿಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ಸ್ಥಳದಲ್ಲೇ ಇದ್ದು ಎಲ್ಲರ ಚಿಕಿತ್ಸೆ ಮುಗಿಯುವವರೆಗೆ ನಿಗಾ ವಹಿಸಿ, ದಾಖಲು ಮಾಡಿಕೊಳ್ಳುವವರಿಗೆ ವಾರ್ಡ್ ವ್ಯವಸ್ಥೆ ಪೂರ್ಣಗೊಳ್ಳುವವರೆಗೆ ಲಕ್ಷ್ಯ ವಹಿಸಿದರು. ಇಂಥ ಘಟನೆಗಳು ಸಂಭವಿಸಿದಾಗ ಎಲ್ಲಾ ವೈದ್ಯರು ಅಲರ್ಟ್ ಆಗಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು. ಇವರಿಗೆ ಸಿದ್ಧಪಡಿಸಿದ ವಾರ್ಡ್ ನಲ್ಲಿ ಕನಿಷ್ಠ ಇಬ್ಬರು ನರ್ಸ್ ಗಳನ್ನು ನಿಯೋಜನೆ ಮಾಡಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.