ಹೊನ್ನಾವರ : ನಾಲ್ಕು ವರ್ಷ ಕಳೆದು ಇನ್ನೊಂದು ಚುನಾವಣೆ ಸಮಿಪಿಸುತ್ತಿದ್ದರೂ, ಬಿ.ಜೆ.ಪಿ. ಸರ್ಕಾರ ಯಾವುದೇ ಅಭಿವೃದ್ಧಿ ಕೈಗೊಳ್ಳದೇ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಗಾಳಿಗೆ ತೂರುತ್ತಿದೆ ಎಂದು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಆಪಾದಿಸಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಪಟ್ಟಣದ ಸೋಶಿಯಲ್ ಕ್ಲಬ್ ಸಭಾಭವನದಲ್ಲಿ ಏರ್ಪಡಿಸಿದ ಮತಗಟ್ಟೆ ಸಮಿತಿ ರಚನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸೇರಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ. ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದ್ದು, ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದ್ದು, ಜನರ ಬಾಳು ದುಸ್ತರವಾಗಿದೆ ಎಂದರು. ಬಿ.ಜೆ.ಪಿ. ಸರ್ಕಾರ ತನ್ನ ಎಲ್ಲಾ ತಪ್ಪುಗಳನ್ನು ಮರೆಮಾಚಲು ಜನರ ಬಾವನೆಗಳನ್ನು ಕೆರಳಿಸಿ ಸಮಾಜದ ಸ್ವಾಸ್ತವನ್ನು ಹದಗೆಡಿಸುತ್ತಿದೆ ಎಂದು ಅವರು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ ಪಕ್ಷದ ಹಿರಿಯ ದುರೀಣ, ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ರಾಮಾ ಮೊಗೇರ ಮಾತನಾಡಿ, ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಬಿ.ಜೆ.ಪಿ. ಪಕ್ಷ ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಈಗ ಎಲ್ಲವನ್ನು ಮರೆತಿದೆ ಎಂದರು. ಸಿದ್ಧರಾಮಯ್ಯ ಸರ್ಕಾರ ಪರೇಶ ಮೇಸ್ತನ ಪ್ರಕರಣವನ್ನು ಅವರ ತಂದೆ-ತಾಯಿಯ ಒತ್ತಾಯದ ಮೇರೆಗೆ ಸಿ.ಬಿ.ಐ. ತನಿಖೆಗೆ ನೀಡಿದ್ದರೂ, ಕೇಂದ್ರದ ಮೋದಿ ಸರ್ಕಾರದ ಅಧೀನದಲ್ಲಿರುವ ಸಿ.ಬಿ.ಐ. ನಿಂದ ಪರೇಶ ಮೇಸ್ತನಿಗೆ ನ್ಯಾಯ ಸಿಗುವುದು ಮರಿಚಿಕೆಯಾಗಿದೆ ಎಂದರು. ಈ ಕುರಿತಂತೆ ಬಿ.ಜೆ.ಪಿ.ಯ ಶಾಸಕರು ಮತ್ತು ಸಂಸದರು ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಆಪಾದಿಸಿದರು.

RELATED ARTICLES  ಕರಾವಳಿ ಡ್ರೀಮ್ ಬಾಯ್ಸ್ ಡಾನ್ಸ್ ಗ್ರೂಪ್ ಹೊಸ ಹಿತ್ತಲ ಮಂಕಿ ಇವರ ಆಶ್ರಯದಲ್ಲಿ ೯ನೇ ವರ್ಷದ ಪ್ರತಿಭಾ ಪುರಸ್ಕಾರ

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಇದೇ ಮೊದಲ ಬಾರಿ ಅಖಿಲ ಭಾರತ ಕಾಂಗ್ರೆಸ್ ಪಕ್ಷ ಡಿಜಿಟಲ್ ವ್ಯವಸ್ಥೆಯ ಮೂಲಕ ಸದಸ್ಯತ್ವ ನೋಂದಣಿ ಆಂದೋಲನವನ್ನು ದೇಶಾದ್ಯಂತ ಯಶಸ್ವಿಯಾಗಿ ಮುಗಿಸಿದ್ದು, ಪ್ರತಿ ಭೂತ್ ಮಟ್ಟದಲ್ಲಿ ೨೫ ಸದಸ್ಯರನ್ನೊಳಗೊಂಡ ಕ್ರಿಯಾಶೀಲ ಸಮಿತಿಯನ್ನು ರಚಿಸುವಂತೆ ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಗೆ ಆದೇಶಿಸಿದ್ದು, ಈಗಾಗಲೇ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಮತಗಟ್ಟೆ ಕಾರ್ಯಕರ್ತರು ಉತ್ಸಾಹದಿಂದ ತಮ್ಮ ಕಾರ್ಯವನ್ನು ಪೂರೈಸುತ್ತಿದ್ದಾರೆ ಎಂದರು.

RELATED ARTICLES  ಅಶ್ವಥ್ ನಾರಾಯಣ ಅವರು ಮಾನಸಿಕ ಅಸ್ವಸ್ಥ : ಬಿ.ಕೆ ಹರಿಪ್ರಸಾದ ಕಿಡಿ

ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಕಿಸಾನ್ ವಿಭಾಗದ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಸಾಂಸ್ಥಿಕ ಚುನಾವಣೆ ಪ್ರಗತಿಯಲ್ಲಿದ್ದು, ಈಗಾಗಲೇ ಚುನಾವಣಾ ವೇಳಾಪಟ್ಟಿ ಘೋಷಿಸಲಾಗಿದೆ ಎಂದರು. ಅದರಂತೆ ಕ್ರಿಯಾಶೀಲ ಕಾರ್ಯಕರ್ತರನ್ನು ಪ್ರತಿ ಮತಗಟ್ಟೆ ಮಟ್ಟದಲ್ಲಿ ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಲೇಟರ್ ಹೆಡ್ ಸಂಸ್ಕೃತಿಯನ್ನು ಕಟ್ಟುನಿಟ್ಟಾಗಿ ತಡೆಹಿಡಿಯಲಾಗುವುದು ಎಂದರು.

ವೇದಿಕೆಯಲ್ಲಿ ಇನ್ನೋರ್ವ ಜಿಲ್ಲಾ ಕಾಂಗ್ರೆಸ್ ವೀಕ್ಷಕ, ಭಟ್ಕಳ ಜಾಲಿ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ರಹೀಮ್ ಶೇಖ್, ಕೆ.ಪಿ.ಸಿ.ಸಿ. ಸದಸ್ಯ ವಿನೋದ ನಾಯ್ಕ, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಿಕ್ರಿಯಾ ಶೇಖ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣಾ ಹರಿಜನ, ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್. ಗೌಡ, ಇನ್ನೂ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.