ಹೊನ್ನಾವರ: ಕೆರೆಯೊಂದರಲ್ಲಿ ಆಕಸ್ಮಿಕವಾಗಿ ಜಾರಿಬಿದ್ದು ಸಾವು ನೋವಿನ ನಡುವೆ ಹೋರಾಡುತಿದ್ದ ಗೂಳಿಯನ್ನು ಸ್ಥಳೀಯ ಗೋ ಪ್ರೇಮಿಗಳು ಹಾಗೂ ಗೋ ರಕ್ಷಣಾ ವೇದಿಕೆಯ ಸದಸ್ಯರು ಸೇರಿ ರಕ್ಷಣೆ ಮಾಡುವ ಮೂಲಕ ಮಾನವೀಯ ಕಾರ್ಯ ಮಾಡಿ ಮೆಚ್ಚುಗೆ ಪಡೆದಿದ್ದಾರೆ. ಕೆರೆಯಲ್ಲಿ ದೊಡ್ಡದಾದ ಏಣಿ ಇಳಿಸಿ,ಓರ್ವ ಗೋ ಪ್ರೇಮಿ ಏಣಿ ಮೂಲಕ ಕೆರೆಗೆ ಇಳಿದು ಪ್ರಾಣದ ಹಂಗು ತೊರೆದು ಕೆರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಗೂಳಿಯ ದೇಹಕ್ಕೆ ಹಗ್ಗ ಸುತ್ತಿ ಕೆರೆಯ ದಂಡೆಯ ಬದಿಯಲ್ಲಿದ್ದ ಸದಸ್ಯರಿಗೆ ಹಗ್ಗ ನೀಡಿದರು.
ದಂಡೆಯ ಮೇಲಿದ್ದ ಸದಸ್ಯರು ಹಗ್ಗವನ್ನು ನಿಧಾನಕ್ಕೆ ಎಳೆದು ಗೋವನ್ನು ಮೇಲಕ್ಕೆತ್ತಿದರು. ನಂತರ ಗೂಳಿಗೆ ಸುತ್ತಲಾದ ಹಗ್ಗ ಬಿಡಿಸಿ ಬಿಡುಗಡೆಗೊಳಿಸಿದರು. ಈ ಪುಣ್ಯಕಾರ್ಯದಲ್ಲಿ ಗೋ ರಕ್ಷಣಾ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಗೌಡ ಹಾಗೂ ಸದಸ್ಯರಾದ ಧರ್ಮ ನಾಯ್ಕ, ಗಣಪಯ್ಯ ಮೇಸ್ತ, ವಿನಾಯಕ ನಾಯ್ಕ, ರಾಮಚಂದ್ರ ನಾಯ್ಕ, ಆನಂತ ನಾಯ್ಕ, ಮಯೂರ ಗೌಡ, ಮಂಜುನಾಥ್ ಗೌಡ, ನಾಗಪ್ಪ ಗೌಡ ಮತ್ತಿತರು ಪಾಲ್ಗೊಂಡಿದ್ದರು.