ಬೆಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಗಂಗಾ ಮಠದ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಇಂದು ಡಿಸ್ಜಾರ್ಜ್ ಆಗಿ ಶ್ರೀಗಳು ಮಠಕ್ಕೆ ಆಗಮಿಸಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ. ಸ್ವಾಮೀಜಿಯವರಿಗೆ ಶೀತ, ಜ್ವರ, ಕಫ ಹಾಗೂ ಪಿತ್ತನಾಳದ ಸಮಸ್ಯೆ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಲವಲವಿಕೆಯಿಂದ ಇದ್ದ ಅವರು ಇಂದು ಮುಂಜಾನೆ ಆಸ್ಪತ್ರೆಯಲ್ಲಿಯೇ ಶಿವಪೂಜೆ ಮಾಡಿ ನಂತರ ಪತ್ರಿಕೆಗಳನ್ನು ಓದುವ ಮೂಲಕ ಪ್ರಸಕ್ತ ವಿದ್ಯಮಾನಗಳನ್ನು ತಿಳಿದುಕೊಂಡರು. ನಿನ್ನೆ ವೈದ್ಯರು ಶ್ರೀಗಳಿಗೆ ಚಿಕಿತ್ಸೆ ನೀಡಿ ಸ್ಟಂಟ್ ಅಳವಡಿಸಿದ್ದು, ಇದೀಗ ಚೇತರಿಸಿಕೊಂಡಿರುವ ಶ್ರೀಗಳು ಎಂದಿನಂತೆ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರ ದಂಡೇ ಶ್ರೀಮಠಕ್ಕೆ ಹರಿದುಬಂತು. ಅಲ್ಲದೆ, ಗಣ್ಯರು ಬೆಂಗಳೂರಿನ ಆಸ್ಪತ್ರೆಗೂ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಮಠಕ್ಕೆ ಶ್ರೀಗಳು ತೆರಳುತ್ತಿದ್ದಂತೆ ಭಕ್ತರು ಅವರ ದರ್ಶನ ಪಡೆಯಲು ಮುಗಿಬಿದ್ದರು. ಶ್ರೀಗಳ ಆರೋಗ್ಯದ ಮೇಲೆ ನಿಗಾವಹಿಸಿರುವ ವೈದ್ಯರ ತಂಡ ಮುಂದಿನ ಮೂರು ದಿನಗಳ ಕಾಲ ಮಠದಲ್ಲೇ ಚಿಕಿತ್ಸೆ ಮುಂದುವರಿಸಲಿದ್ದಾರೆ.