ಕುಮಟಾ : ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಮಳೆ ಬಂದಾಗ ವಿಪರೀತ ಸೋರಿಕೆಯಾಗುತ್ತಿದೆ ಎಂದು ಕೆಲವು ವರ್ಷಗಳ ಹಿಂದಿನ ವಿಡಿಯೋವನ್ನು ಪುನಃ ಅಪ್ ಲೋಡ್ ಮಾಡಿ ಕೊಂಕಣ ರೈಲ್ವೆ ವ್ಯವಸ್ಥೆಯ ಬಗ್ಗೆ ಕಿಡಿಗೇಡಿಗಳು ಗೇಲಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಳೆ ಜೋರಾಗಿದ್ದ ಸಂದರ್ಭದಲ್ಲೇ ಶಾಸಕ ದಿನಕರ ಶೆಟ್ಟಿ ಅವರು ನಿಲ್ದಾಣಕ್ಕೆ ಭೇಟಿ ಅಧಿಕಾರಿಗಳೊಂದಿಗೆ ಗುರುವಾರ ಪರಿಶೀಲನೆ ನಡೆಸಿದರು
ಈ ಬಗ್ಗೆ ಪ್ರತಿಕ್ರಿಯಿಸಿದ ಅಲ್ಲಿಯ ಅಧಿಕಾರಿ, ಸಿಬ್ಬಂದಿಗಳು, “ಎಷ್ಟೇ ದೊಡ್ಡ ಮಳೆ ಬಿದ್ದರೂ ಇಲ್ಲಿ ಸೋರಿಕೆಯ ಸಮಸ್ಯೆ ಇಲ್ಲ. ಕೆಲವು ವರ್ಷಗಳ ಹಿಂದೆ ಉಂಟಾಗಿದ್ದ ಸೋರಿಕೆ ಸಮಸ್ಯೆಯನ್ನು ತಕ್ಷಣ ಬಗೆಹರಿಸಿದ್ದೆವು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಆ ವಿಡಿಯೋವನ್ನು ಈಗಿನ ಸಮಸ್ಯೆಯೆಂಬಂತೆ ಜನರಲ್ಲಿ ಬಿಂಬಿಸಿ ತಪ್ಪು ಸಂದೇಶ ರವಾನೆ ಮಾಡಲಾಗಿದೆ ಎಂದು ವಿವರಿಸಿದರು.
ನಂತರ ಮಾಧ್ಯಮದ ಜೊತೆ ಮಾತನಾಡಿದ ಶಾಸಕರು ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇನ್ನೊಬ್ಬರ ಬಗ್ಗೆ ಅಪಪ್ರಚಾರ ಮಾಡಲೆಂದೇ ಕೆಲವರು ಅದನ್ನು ಬಳಸುತ್ತಿದ್ದಾರೆ. ವಸ್ತು ಸ್ಥಿತಿ ತಿಳಿದುಕೊಳ್ಳಬೇಕೆಂದು ಮಳೆ ಇರುವ ಸಮಯ ನೋಡಿ ಖುದ್ದು ಭೇಟಿ ನೀಡಿದ್ದೇನೆ. ಇಲ್ಲಿ ಅಂತಹ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು..
ನಂತರ ರೈಲ್ವೇಗಳ ಟಿಕೆಟ್ ಕಾಯ್ದಿರಿಸುವ ಬಗ್ಗೆ ಶಾಸಕರು ಕೇಳಿದಾಗ, ಈಗ ಬೆಂಗಳೂರು ಹಾಗೂ ಇತರೆ ಪ್ಯಾಸೆಂಜರ್ ರೈಲುಗಳಿಗೆ ಕೊನೇ ಕ್ಷಣದವರೆಗೂ ಟಿಕೆಟ್ ನೀಡಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು. ಸಿಬ್ಬಂದಿಗಳ ಕಾರ್ಯ ಸಮಯ, ವೇತನ ಮುಂತಾದವುಗಳ ಮಾಹಿತಿಯನ್ನು ಪಡೆದು ಕೊಂಡರು.