ಕುಮಟಾ: ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ಆಡಳಿತ ಎಂಟು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕುಮಟಾ ರೈತ ಮೋರ್ಚಾ ವತಿಯಿಂದ ಕತಗಾಲದ ಗಜು ಪೈ ನಿವಾಸದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಪ್ರಸನ್ನ ಕೆರೇಕೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರದ ಎಂಟು ವರ್ಷಗಳ ಪಾರದರ್ಶಕತೆಯ, ಪರಿವರ್ತನೆಯ ಸಾಧನಾ ಪರ್ವವನ್ನು ಜನರ ಮುಂದಿಡುವ ನಿಟ್ಟಿನಲ್ಲಿ ನಾವು ಹೆಜ್ಜೆಯಿಟ್ಟಿದ್ದೇವೆ. ಬಡತನ ನಿರ್ಮೂಲನೆಗೆ ಅನೇಕ ಯೋಜನೆಗಳನ್ನು ಕೃಷಿಕರಿಗೆ, ಬಡವರಿಗಾಗಿ ಮೋದಿಯವರು ತಂದಿದ್ದಾರೆ. ರೈತ ಬೆಳೆಯ ಮೌಲ್ಯವರ್ಧನೆ ಮಾಡುವಂತಾಗಬೇಕು. ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣವು ಕೇಂದ್ರ ಸರ್ಕಾರದ ಉದ್ದೇಶವಾಗಿದ್ದು ಆ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದೆ ಎಂದರು.
ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅವರು ಪಕ್ಷದ ಸಾಧನೆಗಳನ್ನು ವಿವರಿಸಿದರು. ನಂತರ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಪ್ರಧಾನಿ ಮೋದಿಯವರು ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ತಂದಿದ್ದು, ಬಹುತೇಕ ಎಲ್ಲರಿಗೂ ಆ ಯೋಜನೆಗಳು ತಲುಪಿರುವುದು ಸಂತಸದ ವಿಚಾರ. ಅವರ ಆಡಳಿತದ ಸಾಧನೆಗಳನ್ನು ಜನರ ಮುಂದಿಡುವ ಕೆಲಸ ಕಾರ್ಯಕರ್ತರಿಂದ ಆಗಬೇಕಿದೆ. ಪಕ್ಷನಿಷ್ಠೆಯಿಂದ ಎಲ್ಲರೂ ಈ ಕಾರ್ಯದಲ್ಲಿ ತೊಡಗಿರುವುದು ಸಕಾರಾತ್ಮಕ ಬೆಳವಣಿಗೆ ಎಂದು ಹೇಳಿದರು.
ಮಂಡಲದ ಅಧ್ಯಕ್ಷ ಹೇಮಂತ ಕುಮಾರ್ ಗಾಂವಕರ ಮಾತನಾಡಿ ಕಾಂಗ್ರೆಸ್ ದುರಾಡಳಿತದಿಂದ ಭಾರತದ ಮರ್ಯಾದೆ ವಿಶ್ವಮಟ್ಟದಲ್ಲಿ ತಳಮಟ್ಟಕ್ಕೆ ಸಾಗಿದ್ದು ದುರಾದೃಷ್ಟಕರ. ಧಾರ್ಮಿಕತೆಯ ನೆಲೆಗಟ್ಟಿನಲ್ಲಿ ಮಾತ್ರ ಈ ದೇಶವನ್ನು ಕಟ್ಟಲು ಸಾಧ್ಯವಿದ್ದು ಮೋದಿಯವರು ಪ್ರಧಾನಿಯಾದ ಬಳಿಕ ಅದು ಸಾಧ್ಯವಾಗುತ್ತಿದೆ. ಜೊತೆಗೆ ಇಡೀ ಜಗತ್ತಿನ ಮಂದಿ ಭಾರತದ ಸಾಮರ್ಥ್ಯಕ್ಕೆ ತಲೆ ಬಾಗುತ್ತಿದೆ, ಗೌರವಿಸುತ್ತಿದೆ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಪ್ರಶಾಂತ ನಾಯ್ಕ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಷ್ಣುಮೂರ್ತಿ ಹೆಗಡೆ, ಮಹಾಶಕ್ತಿಕೆಂದ್ರದ ಅಧ್ಯಕ್ಷ ಮಧುಸೂದನ ಹೆಗಡೆ, ರೈತ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಎಂ. ನಾಯ್ಕ, ಜಿಲ್ಲಾ ಪ್ರಭಾರಿಗಳಾದ ಎಂ.ಜಿ.ಭಟ್ಟ, ನಾಗರಾಜ ನಾಯಕ ತೊರ್ಕೆ, ಪಂಚಾಯ್ತಿ ಅಧ್ಯಕ್ಷೆ ಕೇಸರಿ ಜೈನ್ ಇದ್ದರು.