ಕುಮಟಾ: ಕುಮಟಾ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರವೀಣ ಹೆಗಡೆ ಅವಿರೋಧವಾಗಿ ಆಯ್ಕೆಯಾದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಉಪಾಧ್ಯಕ್ಷರಾಗಿ ಎಂ.ಜಿ.ನಾಯ್ಕ, ಕಾರ್ಯದರ್ಶಿಯಾಗಿ ಮಂಜುನಾಥ ಈರಗೊಪ್ಪ, ಖಜಾಂಚಿಯಾಗಿ ವಿ.ಡಿ.ಭಟ್ಟ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಎಚ್.ಗಣೇಶ ರಾವ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ, ಪ್ರವೀಣ ಹೆಗಡೆ ಮಾತನಾಡಿ, ಸಂಘದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಈ ಹಿಂದೆ ೨ ಅವಧಿಗೆ ಅಧ್ಯಕ್ಷರಾಗಿ ಸುಬ್ರಾಯ ಭಟ್ಟ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ನೀಡಿದ ಬೆಂಬಲವನ್ನು ಪ್ರತಿಯೊಬ್ಬ ಸದಸ್ಯರು ನನಗೆ ನೀಡಿ, ಸಂಘದ ಕಾರ್ಯಚಟುವಟಿಕೆಗೆ ಸಹಕಾರ ನೀಡಬೇಕೆಂದು ವಿನಂತಿಸಿದರು.
ಉಪಾಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಿ, ಎಂ.ಜಿ.ನಾಯ್ಕ ಮಾತನಾಡಿ, ಸಂಘದ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತ್ತಷ್ಟು ಸಂಘಟನೆ ಮಾಡಲು ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.
ಚುನಾವಣಾಧಿಕಾರಿಯಾಗಿ ಪತ್ರಕರ್ತ ಜಯದೇವ ಬಳಗಂಡಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಸುಬ್ರಾಯ ಭಟ್ಟ, ಸಂಘದ ಸದಸ್ಯರಾದ ಸದಾಶಿವ ಹೆಗಡೆ, ಶ್ರೀಕೃಷ್ಣ ಭಟ್ಟ, ಶಂಕರ ಶರ್ಮಾ, ಗೋವಿಂದ ಶಾನಭಾಗ, ಗಣೇಶ ಜೋಶಿ, ಶ್ರೀಕಾಂತ ಶಾನಭಾಗ, ಆರ್.ಜಿ.ಭಟ್ಟ, ನಾಗರಾಜ ಪಟಗಾರ, ಮಂಜುನಾಥ ದೀವಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.