ರಾಜ್ಯ ಪದವಿ ಪೂರ್ಣ ಶಿಕ್ಷಣ ಇಲಾಖೆ ನಡೆಸಿರುವ ಪ್ರಸಕ್ತ 2022ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಶೇಕಡಾ 61.88ರಷ್ಟು ಫಲಿತಾಂಶ ಬಂದಿದೆ.
ಬೆಂಗಳೂರಿನಲ್ಲಿಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು. ಈ ವರ್ಷ ಒಟ್ಟು 5,99,794 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 4.02,697 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಶೇಕಡಾ 62.18 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, ನಗರ ಪ್ರದೇಶದಲ್ಲಿ ಶೇಕಡಾ 61.78 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆ 74.33 ಪ್ರತಿಶತದೊಂದಿಗೆ ಐದನೆ ಸ್ಥಾನಕ್ಕೆ ತೃಪ್ತಿಪಡಬೇಕಿದೆ. ಮೊದಲೆರಡು ಸ್ಥಾನದಲ್ಲಿ ದಕ್ಷಿಣ ಕನ್ನಡ ಹಾಗು ಉಡುಪಿ ಕ್ರಮವಾಗಿ ಸ್ಥಾನವನ್ನು ಪಡೆದುಕೊಂಡಿವೆ. 2020 ನೇ ಸಾಲಿನಲ್ಲಿ ಜಿಲ್ಲೆಯು 80.97 ಪ್ರತಿಶತ ಗಳಿಸಿತ್ತು. ಆದರೆ ಈ ಬಾರಿ 74.33% ಗೆ ಕುಸಿದಿದೆ.