ಹೊನ್ನಾವರ: ಮಾಜಿ ಶಾಸಕ ದಿ.ಮೋಹನ ಕೆ.ಶೆಟ್ಟಿ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ 60 ಲೀಟರ್ ಸಾಮಥ್ರ್ಯದ ಶುದ್ಧ ಕುಡಿಯುವ ನೀರಿನ ಶುದ್ಧೀಕರಣ ಘಟಕವನ್ನು ಇಲ್ಲಿನ ಸರ್ಕಾರಿ ಮೋಹನ ಕೆ.ಶೆಟ್ಟಿ ಪದವಿಪೂರ್ವ ಕಾಲೇಜಿಗೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಕೊಡುಗೆಯಾಗಿ ನೀಡಿದರು.
ನಂತರ ಮಾತನಾಡಿದ ಅವರು, 70ನೇ ವರ್ಷದ ಜನ್ಮದಿನದ ಅಂಗವಾಗಿ ಕಳೆದ ಕೆಲ ದಿನದ ಹಿಂದೆ ಕಾಲೇಜಿಗೆ ಆಗಮಿಸಿದಾಗ ಬೇಡಿಕೆಯಂತೆ ಮೋಹನ ಕೆ.ಶೆಟ್ಟಿ ಟ್ರಸ್ಟ ವತಿಯಿಂದ ಈ ಸೌಲಭ್ಯ ನೀಡಲಾಗಿದೆ. ದಿ. ಮೋಹನ ಶೆಟ್ಟಿ ಅವರು ಸತತ ಎರಡು ಬಾರಿ ಕ್ಷೇತ್ರದ ಶಾಸಕರಾಗಿ ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ಸಮಸ್ಯೆ ಬಗೆಹರಿಸುವ ಮೂಲಕ ಕ್ಷೇತ್ರದೆಲ್ಲಡೆ ಚಿರಪರಿಚಿತರಾಗಿದ್ದರು. ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಶೈಕ್ಷಣಿಕವಾಗಿ ವಿಶೇಷ ಕೊಡುಗೆ ನೀಡಲಾಗುತ್ತಿದ್ದು, ಈ ಹಿಂದೆ ನೋಟ್ ಬುಕ್ ವಿತರಿಸಿದ್ದು, ಇದೀಗ ಶೈಕ್ಷಣಿಕ ಸಂಸ್ಥೆಗೆ ಕೊಡುಗೆ ನೀಡುತ್ತಿದ್ದೇವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ, ಜನಾನುರಾಗಿ ದಿ.ಮೋಹನ ಕೆ.ಶೆಟ್ಟಿ ಅವರು ಹಾಗೂ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಕಾಲೇಜಿಗಾಗಿ ಸ್ಥಳ ದಾನಿಗಳಾಗಿ ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಿದ್ದಾರೆ. ಇವರು ತಾಲೂಕಿನಲ್ಲಿಯ ಹಲವು ಸಮಸ್ಯೆಗಳನ್ನು ತಮ್ಮ ಅಧಿಕಾರವಧಿಯಲ್ಲಿ ಬಗೆಹರಿಸುವ ಮೂಲಕ ಜನಪರ ಆಡಳಿತ ನೀಡಿದ್ದರು ಎಂದು ಸ್ಮರಿಸಿದರು.
ಈ ವೇಳೆ ಶಾರದಾ ಶೆಟ್ಟಿ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಿದರು. ಪ್ರಾಚಾರ್ಯ ರವಿ ಗೌಡ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ನಾಯ್ಕ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ್, ಮುಗ್ವಾ ಗ್ರಾಪಂ ಅಧ್ಯಕ್ಷೆ ಗೌರಿ ಅಂಬಿಗ, ಗ್ರಾಪಂ ಸದಸ್ಯ ಐ.ವಿ.ನಾಯ್ಕ ಇತರರು ಇದ್ದರು. ಉಪನ್ಯಾಸಕ ಪ್ರಭಾಕರ ಸ್ವಾಗತಿಸಿ, ದಾಕ್ಷಾಯಣಿ ನಾಯ್ಕ ವಂದಿಸಿದರು. ವಿನೋದ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.