ಹೊನ್ನಾವರ: ಗುರು ಮತ್ತು ಗೋವಿಂದ ಒಟ್ಟಿಗೇ ಪ್ರತ್ಯಕ್ಷರಾದರೆ ಮೊದಲ ಪ್ರಣಾಮ ಗುರುವಿಗೆ. ಯಾಕೆಂದರೆ ಗುರುವಿದ್ದರೆ ಗೋವಿಂದನ ದರ್ಶನ. ಗುರು ಎಂದರೆ ದ್ವಾರ. ಗುರುವಿಗೆ ಎಷ್ಟು ಪ್ರಾಮುಖ್ಯವೆಂದರೆ ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರ, ಪರಬ್ರಹ್ಮ ಎಂದಿದ್ದಾರೆ. ದ್ವಾರ ಮೊದಲು ಸಿಗುವಂಥದ್ದು. ದೇವರು ಆಮೇಲೆ ಸಿಗುವಂಥದ್ದು ಎಂದು ರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು. ತಾಲೂಕಿನ ಅರೆಅಂಗಡಿಯಲ್ಲಿ ಶ್ರೀಕರಿಕಾನ ಪರಮೇಶ್ವರೀ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಶಿಲಾಮಯ ಮಹಾದ್ವಾರವನ್ನು ಲೋಕಾರ್ಪಣೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ದಟ್ಟವಾದ ಕಾನಿನ ಮಧ್ಯದಲ್ಲಿ ಪರಮೇಶ್ವರೀ ಬೆಳಕಿನ ರೇಖೆಯಾಗಿ ಕಂಗೊಳಿಸುತ್ತಿದ್ದಾಳೆ. ದೇವರೆಷ್ಟು ಮುಖ್ಯವೋ ದ್ವಾರವೂ ಅಷ್ಟೇ ಮುಖ್ಯ. ದ್ವಾರದ ಮೂಲಕವೇ ದೇವರ ದರ್ಶನ ಎಂದ ಅವರು, ಶ್ರೀಕರಿಕಾನ ಪರಮೇಶ್ವರಿಗೆ ಶಾಶ್ವತವಾದ ಶಿಲಾಮಯ ದ್ವಾರ ನಿರ್ಮಾಣವಾಗಿದೆ. ಕರಿಕಾಮ ಪರಮೇಶ್ವರೀ ಕಲ್ಲಿನ ಬಿಂಬ. ಕಲ್ಲೇ ದೇವಿಯ ರೂಪದಲ್ಲಿ ಒಡಮೂಡಿದ್ದಾಗಿದೆ. ಮನುಷ್ಯ ಕೆತ್ತಿದ ಕಲ್ಲು ಅಲ್ಲ. ಸಹಜವಾಗಿ, ನೈಸರ್ಗಿಕವಾಗಿ ದಟ್ಟ ಕಾನನದ ಮಧ್ಯೆ ಒಡಮೂಡಿದ ದೇವಿ. ಶಿಲೆಯೇ ದೇವರಾಗಿ ಬಂದಿದೆ. ಶಿಲೆಯ ಮಹಾದ್ವಾರ ಸರಿಯಾದುದು ಎಂದು ನುಡಿದರು. ಶ್ರೀಕರಿಕಾನ ಪರಮೇಶ್ವರೀ ದೇವಾಲಯ ಬರುವ ದಿನಗಳಲ್ಲಿ ಪೂರ್ತಿಯಾಗಿ ಶಿಲಾಮಯವಾಗಿ ನಿರ್ಮಾಣವಾಗಲಿ ಎಂದು ಹಾರೈಸಿದರು.

RELATED ARTICLES  ಹಿಂದೂ ಹುಡುಗಿಯರ ಮೈಯನ್ನು ಯಾರಾದ್ರೂ ಮುಟ್ಟಿದರೆ ಅಂತವರ ಕೈ ಕಡಿಯಿರಿ: ಅನಂತ ಕುಮಾರ್ ಹೆಗಡೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಶಿಲಾಶಾಸನ ಫಲಕ ಅನಾವರಣ ಮಾಡಿ ಮಾತನಾಡಿ, ಬದಲಾದ ಭಾರತದಲ್ಲಿ ಹಿಂದು ಧರ್ಮ ಬಲಿಷ್ಠವಾಗುತ್ತಿದೆ. ರಾಮ ಮಂದಿರ ನಿರ್ಮಾಣದ ಬಗ್ಗೆ ಅನೇಕರು ಸಂಶಯ ವ್ಯಕ್ತಪಡಿಸಿದ್ದರು. ಆದರೆ ಈಗ ಅದು ನಿರ್ಮಾಣಾಗುತ್ತಿದೆ ಎಂದರು. ಗೋಶಾಲೆ ತೆರಯಲು ಸರಕಾರ ಎಲ್ಲ ರೀತಿಯ ಕ್ರಮಕೈಗೊಳ್ಳುತ್ತದೆ. ಆಮಿಶ, ಒತ್ತಡ, ವಂಚನೆಯ ಮೂಲಕ ಮತಾಂತರ ಮಾಡಬಾರದು ಎಂಬ ಸರಳ ದೃಷ್ಟಿಯಿಂದ ಮತಾಂತರ ನಿಷೇಧ ಕಾನೂನು ಜಾರಿಗೆ ತಂದಿದೆ ಎಂದರು.

ಪ್ರತಿ ದೇವಸ್ಥಾನಗಳೂ ಸಮಾಜ ಕಟ್ಟುವ ಕೇಂದ್ರಗಳಾಗಬೇಕು. ದೇವಸ್ಥಾನದ ಹಣವನ್ನು ಸಮಾಜ ಕಟ್ಟುವ ಕಾರ್ಯಕ್ಕೆ ಸದ್ವಿನಿಯೋಗ ಆಗಬೇಕು. ಈ ನಿಟ್ಟಿನಲ್ಲಿ ಸಪ್ತಪದಿ ಕಾರ್ಯಕ್ರಮ ತರಲಾಗಿದೆ. ಒಂದು ದೇವಸ್ಥಾನದ ಜೀರ್ಣೋದ್ದಾರ ಆ ಗ್ರಾಮದ ಜನರ ಆತ್ಮಸ್ಥೈರ್ಯ ಎಂದರು.

RELATED ARTICLES  ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಚಲನಚಿತ್ರ ನಟನ ರಕ್ಷಣೆ.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸೌರ ವಿದ್ಯುತ್ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಸರಕಾರದಲ್ಲಿ ಅನೇಕ ಹೊಸ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಬಡವರಿಗ ಶಕ್ತಿ ತುಂಬುವ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.

ಶಾಸಕ ದಿನಕರ ಶೆಟ್ಟಿ, ಶ್ರೀಕರಿಕಾನ ಪರಮೇಶ್ವರೀ ದೇವಸ್ಥಾನ ಶಕ್ತಿ ಸ್ಥಳವಾಗಿದೆ ಎಂದರು. ರಾಘವೇಶ್ವರ ಶ್ರೀಗಳು ಹೇಳಿದಂತೆ ಹೊಸಾಡ ಗೋ ಶಾಲೆಗೆ ರಸ್ತೆ, ಗೋಕರ್ಣ ವಿಷ್ಣು ಗುಪ್ತ ವಿಶ್ವವಿದ್ಯಾಲಯದವರೆಗಿನ ರಸ್ತೆ ಕಾರ್ಯವನ್ನು ಚಾಚೂ ತಪ್ಪದೇ ಮಾಡಿರುವುದಾಗಿ ತಿಳಿಸಿದರು.
ವಿದ್ವಾಂಸ ಕಟ್ಟೆ ಪರಮೇಶ್ವರ ಭಟ್, ಜಿ.ಪಂ. ಮಾಜಿ ಸದಸ್ಯ ಕಡತೋಕಾ ಶಿವಾನಂದ ಹೆಗಡೆ, ಉದ್ಯಮಿ ಜಿ.ಜಿ.ಶಂಕರ, ಜಿ.ಪಂ. ಮಾಜಿ ಸದಸ್ಯೆ ಶ್ರೀಕಲಾ ಶಾಸ್ತ್ರಿ, ಶ್ರೀದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಮಾತನಾಡಿದರು. ಸಂಘಟಕ ನೀಲಕೋಡ ಶಂಕರ ಹೆಗಡೆ ಸ್ವಾಗತಿಸಿದರು. ಉಪನ್ಯಾಸಕ ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ವೆಂಕಟ್ರಮಣ ಹೆಗಡೆ ಕವಲಕ್ಕಿ ಮತ್ತಿತರರು ಉಪಸ್ಥಿತರಿದ್ದರು.