ಭಟ್ಕಳ : ಸರ್ಕಾರಿ ಕಚೇರಿ ಮತ್ತು ಸಂಸ್ಥೆಗಳ ನಾಮಫಲಕವು ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಆಡಳಿತ ಭಾಷೆಯಾದ ಕನ್ನಡ ಹಾಗೂ ಸರ್ಕಾರ ಮಾನ್ಯ ಮಾಡಿರುವ ಭಾಷೆಯಲ್ಲಿಯೇ ಇರಬೇಕೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಗ್ರಹಿಸಿದೆ. ಅನೇಕ ಭಾಷೆಗಳನ್ನಾಡುವ, ಬಹು ಸಂಸ್ಕೃತಿಯ ಜನರಿರುವ ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ. ಇಲ್ಲಿ ಸರ್ಕಾರಿ ಕಚೇರಿಯ ನಾಮಫಲಕಗಳಲ್ಲಿನ ಭಾಷೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ನಿಯಮಾವಳಿಯನ್ನು ರೂಪಿಸಿದೆ. ಈ ನಿಯಮಕ್ಕನುಗುಣವಾಗಿ ಎಲ್ಲ ಸರ್ಕಾರಿ ಕಚೇರಿಯ ನಾಮಫಲಕಗಳು ಕನ್ನಡ ಮತ್ತು ಸರ್ಕಾರ ಮಾನ್ಯ ಮಾಡಿರುವ ಭಾಷೆಯಲ್ಲಿಯೇ ಇರಬೇಕು. ಕನ್ನಡಿಗರು ಎಲ್ಲ ಭಾಷೆಯನ್ನು ಗೌರವಿಸುವವರಾಗಿದ್ದಾರೆ. ಭಟ್ಕಳದ ಪುರಸಭೆಯು ಸರ್ಕಾರ ಮಾನ್ಯ ಮಾಡಿರುವ ಭಾಷೆಯ ಹೊರತಾಗಿ ಅನ್ಯಭಾಷೆಯಲ್ಲಿ ನಾಮಫಲಕ ಅಳವಡಿಸಿರುವುದು ಜನಸಮುದಾಯದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಆದರೆ ಆಡಳಿತಾತ್ಮಕ ವಿಷಯ ಬಂದಾಗ ಸರ್ಕಾರಿ ಕಚೇರಿಗಳ ನಾಮಫಲಕಗಳು ಸರ್ಕಾರ ಸೂಚಿಸಿರುವ ನಿಯಮಗಳಿಗೆ ಅನುಗುಣವಾಗಿಯೇ ಇರಬೇಕಾದುದು ಸೂಕ್ತ. ಭಾಷೆ ನಮ್ಮ ನಡುವಿನ ಸಂಪರ್ಕ ಸಾಧನವಾಗಬೇಕೇ ಹೊರತು ಸಂಘರ್ಷಕ್ಕೆ ಕಾರಣವಾಗಬಾರದು. ನಮ್ಮನ್ನು ಒಗ್ಗೂಡಿಸುವ ಸಾಧನವಾಗಬೇಕಾದ ಭಾಷೆ ಪ್ರತ್ಯೇಕಿಸುವ ಸಾಧನವಾಗದಂತೆ ನೋಡಿಕೊಳ್ಳಬೇಕಾದುದು ಜವಾಬ್ದಾರಿಯುತ ಸ್ಥಾನದಲ್ಲಿರುವ ಎಲ್ಲರ ಹೊಣೆಗಾರಿಕೆ. ಈ ನೆಲೆಯಲ್ಲಿ ಸ್ಥಳೀಯ ಸಂಸ್ಥೆಯಾದ ಪುರಸಭೆ ಸರ್ಕಾರದ ನಿಯಮದಂತೆ ಆಡಳಿತ ಭಾಷೆಯಾದ ಕನ್ನಡ ಮತ್ತು ಸರ್ಕಾರ ಮಾನ್ಯ ಮಾಡಿರುವ ಬಾಷೆಯಲ್ಲಿ ಮಾತ್ರವೇ ನಾಮಫಲಕವನ್ನು ಅಳವಡಿಸಿಕೊಳ್ಳಬೇಕು.
ತಾಲೂಕು ಆಡಳಿತವೂ ಕೂಡ ಈ ಕುರಿತು ಗಮನ ಹರಿಸಿ ಸೂಕ್ತ ಕ್ರಮವನ್ನು ತೆಗೆದುಕೊಂಡು ಸಂಘರ್ಷಕ್ಕೆ ಎಡೆಮಾಡಿಕೊಡದಂತೆ ಭಾಷಾ ಸಾಮರಸ್ಯವನ್ನು ಕಾದುಕೊಂಡು ಹೋಗುವಲ್ಲಿ ಮುನ್ನೆಚ್ಚರಿಕೆ ವಹಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು, ಆಗ್ರಹಿಸಿ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದೆ. ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ, ಸಾಹಿತಿಗಳಾದ ಆರ್.ವಿ.ಸರಾಫ್. ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ, ಕೋಶಾಧ್ಯಕ್ಷ ಶ್ರೀಧರ ಶೇಟ್, ಸದಸ್ಯರಾದ ಎಂ.ಪಿ.ಬಂಢಾರಿ, ಗಣೇಶ ಯಾಜಿ, ವೆಂಕಟೇಶ ನಾಯ್ಕ, ಸಂತೋಷ ಆಚಾರ್ಯ, ಮುಂತಾದವರು ಉಪಸ್ಥಿತರಿದ್ದರು.