ದಕ್ಷಿಣ ಭಾರತದ ಖ್ಯಾತ ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ರವರು ಗಂಭೀರವಾದ ಶ್ವಾಸಕೋಶದ ಸೋಂಕಿನಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅನಾರೋಗ್ಯದ ಕಾರಣ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆ ಮೂಲಗಳ ಪ್ರಕಾರ ಅವರು ಕೆಲವು ವರ್ಷಗಳಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಈ ಸೋಂಕು ಪಾರಿವಾಳದ ಹಿಕ್ಕೆಗಳ ಮೂಲಕ ಸೋಂಕಿತ ಗಾಳಿಯನ್ನು ಉಸಿರಾಡುವ ಮೂಲಕ ಹರಡುವ ಅಲರ್ಜಿಯಾಗಿದೆ ಎನ್ನಲಾಗಿದೆ.
ವಿದ್ಯಾಸಾಗರ್ ಅಗಲಿಕೆಗೆ ಚಿತ್ರರಂಗದ ಅನೇಕ ಗಣ್ಯರು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ನಟಿ ಮೀನಾ 2009ರಲ್ಲಿ ಅವರು ಬೆಂಗಳೂರು ಮೂಲದ ವಿದ್ಯಾಸಾಗರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ. ವಿದ್ಯಾ ಸಾಗರ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಮದುವೆಯ ನಂತರ ಈ ಜೋಡಿ ಚೆನ್ನೈನಲ್ಲಿ ನೆಲೆಸಿತ್ತು ಎನ್ನಲಾಗಿದೆ.