ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಡಿಗ್ರಿ ಕಾಲೇಜುಗಳ ಉಪನ್ಯಾಸಕರಿಗೆ ಪ್ರತಿ ವಾರ ನಾಲ್ಕು ಗಂಟೆಗಳ ರೆಮೆಡಿಯಲ್ ಕ್ಲಾಸ್ ಗಳನ್ನು ಮಾಡಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ಕಡ್ಡಾಯ ಮಾಡಿದೆ.
ಉಪನ್ಯಾಸಕರು ರೆಮೆಡಿಯಲ್ ಕ್ಲಾಸ್ ಗಳನ್ನು ಮಾಡದಿದ್ದರೆ ಅದನ್ನು ಋಣಾತ್ಮಕ ಕಾರ್ಯಕ್ಷಮತೆ ಮೌಲ್ಯಮಾಪನ ಎಂದು ಪರಿಗಣಿಸಲಾಗುವುದು ಎಂದು ಇಲಾಖೆಯ ಸುತ್ತೋಲೆಯಲ್ಲಿ ಹೇಳಲಾಗಿದೆ.
ಇತ್ತೀಚೆಗೆ ಇಲಾಖೆಯ ಹಿರಿಯ ಅಧಿಕಾರಿಗಳು ಕಾಲೇಜುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಉಪನ್ಯಾಸಕರು ರೆಮೆಡಿಯಲ್ ಕ್ಲಾಸ್ ಗಳನ್ನು ನಡೆಸುತ್ತಿಲ್ಲ ಎಂಬ ವಿಷಯ ಗಮನಕ್ಕೆ ಬಂದಿದೆ. ಹೀಗಾಗಿ ಎಲ್ಲಾ ಉಪನ್ಯಾಸಕರಿಗೆ ಕೆಲಸದ ವಿಭಾಗಗಳನ್ನು ಸೂಚಿಸಿ ಸುತ್ತೋಲೆ ಹೊರಡಿಸಲಾಗಿದೆ.
ಉಪನ್ಯಾಸಕರಿಗೆ ನೀಡಿರುವ ಕೆಲಸದ ಪ್ರಕಾರ, ಪ್ರತಿ ಉಪನ್ಯಾಸಕರು ಪ್ರತಿ ವಾರ 40 ಗಂಟೆಗಳ ಕಾಲ ಕೆಲಸ ಮಾಡಬೇಕು. ಅವರು ಮಾಡಿರುವ ಕೆಲಸದ ಬಗ್ಗೆ ಕಾಲೇಜು ರಿಜಿಸ್ಟರ್ ನಲ್ಲಿ ದಾಖಲಿಸಬೇಕು. ಪ್ರತಿ ವಾರ ನಾಲ್ಕು ಗಂಟೆಗಳ ರೆಮೆಡಿಯಲ್ ಕ್ಲಾಸ್ ನಡೆಸಬೇಕು. ತಾವು ಏನು ತರಗತಿಗಳನ್ನು ತೆಗೆದುಕೊಂಡಿದ್ದೇವೆ ಎಂಬುದನ್ನು ನಮೂದಿಸಲು ವಿಫಲರಾದಲ್ಲಿ ಅದು ಅವರ ಕಾರ್ಯಕ್ಷಮತೆ ಮೌಲ್ಯಮಾಪನದ ಮೇಲೆ ಪರಿಣಾಮ ಬೀರುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸುತ್ತಾರೆ.