ಕುಮಟಾ :”ಸಾಧಕರನ್ನು ಗುರುತಿಸಿ ಗೌರವಿಸುವ ಕುಮಟಾ ಕನ್ನಡ ಸಂಘದ ಕಾರ್ಯ ಶ್ಲಾಘನೀಯ” ಎಂದು ಜನತಾ ವಿದ್ಯಾಲಯ ಮಿರ್ಜಾನ, ಕೋಡ್ಕಣಿಯ ಮುಖ್ಯಾಧ್ಯಾಪಕ ವಿ. ಪಿ. ಶ್ಯಾನಭಾಗ ಹೇಳಿದರು. ಜನತಾ ವಿದ್ಯಾಲಯ ಮಿರ್ಜಾನ, ಕೋಡ್ಕಣಿ ಪ್ರೌಢಶಾಲೆಯಲ್ಲಿ ಬುಧವಾರ ಕುಮಟಾ ಕನ್ನಡ ಸಂಘದ ವತಿಯಿಂದ ನಡೆದ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಗೌರವಿಸಿ ಸನ್ಮಾನಿಸುವ ಮೂಲಕ ಸಮಾಜದಲ್ಲಿರುವ ಇತರರಿಗೆ ಪ್ರೇರಣೆಯಾಗುವಂತಿರಬೇಕು. ನಮ್ಮ ವಿದ್ಯಾರ್ಥಿಗಳು ಸಹ ತಮ್ಮ ಕಲಿಕೆಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಇಂತಹ ಗೌರವಾದರಗಳಿಗೆ ಭಾಜನರಾಗಲಿ” ಎಂದು ಹಾರೈಸಿದರು. “ಸಿರಿ ಕನ್ನಡ ನುಡಿ” ಪ್ರಶಸ್ತಿ ವಿಜೇತ ಶಿಕ್ಷಕಿ ಭಾರತಿ ಹೆಗಡೆ ಮಾತನಾಡಿ, “ಕನ್ನಡ ಭಾಷೆ ಉದ್ಯೋಗ ನೀಡುವ ಜೊತೆಗೆ ಅನ್ನ ನೀಡಿದೆ. ಕನ್ನಡ ಭಾಷೆ ಓದಲು, ಕಲಿಯಲು, ಮಾತನಾಡಲು ಸುಂದರ. ಇಂತಹ ಕನ್ನಡ ಮಣ್ಣಿನಲ್ಲಿ ಹುಟ್ಟಿರುವುದೇ ಪುಣ್ಯ. ಇತರ ಭಾಷೆಗಳನ್ನು ಕಲಿಯುವುದರ ಜೊತೆಯಲ್ಲಿ ಮಾತೃ ಭಾಷೆಯನ್ನು ಉಸಿರಾಗಿಸಿಕೊಳ್ಳೊಣ. ನನಗೆ ಸಂದ ಗೌರವ ಇತರರಿಗೂ ದೊರೆಯುವಂತಾಗಲಿ” ಎಂದರು.
“ಏಷಿಯನ್ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್”ನಲ್ಲಿ ಭಾರತವನ್ನು ಪ್ರತಿನಿಧಿಸಿ ಕರ್ನಾಟಕಕ್ಕೆ ಕೀರ್ತಿ ತಂದ ಕುಮಟಾದ ವೆಂಕಟೇಶ ಪ್ರಭು ಮಾತನಾಡಿ, “ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ದೇಹದಾಢ್ರ್ಯ, ವೇಟ್ ಲಿಫ್ಟಿಂಗ್ ಮುಂತಾದವುಗಳಲ್ಲಿ ಭಾಗವಹಿಸಬೇಕು. ಈ ಕ್ಷೇತ್ರಗಳಲ್ಲಿ ನೀವು ಸಾಧನೆ ಮಾಡಿದರೆ ನಿಮಗೆ ಉದ್ಯೋಗಾವಕಾಶ ಹುಡುಕಿಕೊಂಡು ಬರುತ್ತದೆ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ ಮಾತನಾಡಿ, “ಆಡಿ, ಬೆಳೆದ ಶಾಲೆಯಲ್ಲಿ ಸುಂದರ ಕಾರ್ಯಕ್ರಮ ನಡೆದಿರುವುದು ಅವಿಸ್ಮರಣೀಯ. ವಿದ್ಯಾ ದೇಗುಲದಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಲಿ. ಕುಮಟಾ ಕನ್ನಡ ಸಂಘ ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ಇರುವ ಸೂಪ್ತ ಪ್ರತಿಭಾವಂತರು ಹಾಗೂ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ನಿರಂತರವಾಗಿ ಮುನ್ನಡೆಸಿಕೊಂಡು ಬರಲಿದೆ. ಈ ದಿಶೆಯಲ್ಲಿ ನಮ್ಮ ವಿದ್ಯಾರ್ಥಿ ಸಮುದಾಯ ಹೆಚ್ಚು ಕ್ರಿಯಾಶೀಲರಾಗಿ ಓದಿನತ್ತ ಗಮನ ನೀಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಯಲ್ಲಿ ಹೆತ್ತವರಿಗೆ ಹಾಗೂ ಸಮಾಜಕ್ಕೆ ಆಸ್ತಿಯಾಗಲಿ” ಎಂದರು.
ಈ ಸಂದರ್ಭ ಜನತಾ ವಿದ್ಯಾಲಯ ಮಿರ್ಜಾನ, ಕೋಡ್ಕಣಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿ “ಸಿರಿ ಕನ್ನಡ ನುಡಿ” ಪ್ರಶಸ್ತಿ ವಿಜೇತ ಶಿಕ್ಷಕಿ ಭಾರತಿ ಹೆಗಡೆ ಹಾಗೂ “ಏಷಿಯನ್ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್”ನಲ್ಲಿ ಭಾರತವನ್ನು ಪ್ರತಿನಿಧಿಸಿ ಕರ್ನಾಟಕಕ್ಕೆ ಕೀರ್ತಿ ತಂದ ಕುಮಟಾದ ವೆಂಕಟೇಶ ಪ್ರಭು ಇವರನ್ನು ಗೌರವಿಸಲಾಯಿತು.
ಸಂಘದ ಕಾರ್ಯದರ್ಶಿ ದಯಾನಂದ ದೇಶಭಂಡಾರಿ, ಉಪಾಧ್ಯಕ್ಷ ಬಾಬು ನಾಯ್ಕ ಮಾತನಾಡಿದರು.
ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪಟಗಾರ, ಸದಸ್ಯರಾದ ನಾಗಪ್ಪ ಮುಕ್ರಿ, ಸುರೇಖಾ ವಾರೇಕರ್, ಪಾಂಡು ಗಾಂವಕರ್, ಅನಿತಾ ಮಾಪಾರಿ, ಶಾಲೆಯ ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ಹಾಜರಿದ್ದರು. ಸಂಘದ ಮಾಧ್ಯಮ ಸಲಹೆಗಾರ ಸಂತೋಷ ನಾಯ್ಕ ಸ್ವಾಗತಿಸಿದರು. ಆರ್. ಎನ್. ಹೆಗಡೆ ನಿರೂಪಿಸಿದರು. ಉಪಾಧ್ಯಕ್ಷ ಮಂಗಲದಾಸ ನಾಯ್ಕ ವಂದಿಸಿದರು.