ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ರಸ್ತೆ ಸಂಚಾರಕ್ಕೂ ಭಾರೀ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.
ಬುಧವಾರ ತಡರಾತ್ರಿಯಿಂದಲೇ ಶುರುವಾದ ಮಳೆಯಿಂದಾಗಿ ಮಂಗಳೂರು ನಗರವನ್ನು ಸಂಪೂರ್ಣ ನಲುಗಿ ಹೋಗುವಂತೆ ಮಾಡಿದೆ. ಮತ್ತೊಂದೆಡೆ ರಸ್ತೆಗಳಲ್ಲಿ ತುಂಬಿ ಹರಿಯುತ್ತಿದ್ದ ನೀರಿನ ನಡುವೆಯೇ ಶಾಲಾ, ಕಾಲೇಜುಗಳ ಮಕ್ಕಳು ಭಾರೀ ಪ್ರಯಾಸದಿಂದ ನಡೆದಾಡುತ್ತಿರುವ ದೃಶ್ಯಗಳು ಕಂಡು ಬಂತು.
ತಗ್ಗು ಪ್ರದೇಶದಲ್ಲಿರುವ ಮನೆಗಳು ಸಂಪೂರ್ಣವಾಗಿ ನೆರೆ ನೀರಿನಿಂದ ಆವೃತವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 1ರ ಶುಕ್ರವಾರದಂದು ಅಂಗನವಾಡಿ ಸಹಿತ ಶಾಲೆ, ಪಿಯುಸಿ ಹಾಗೂ ಪದವಿ ತರಗತಿಗಳಿಗೆ ರಜೆ ನೀಡಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.