ಕುಮಟಾ: ಶಿಕ್ಷಣಕ್ಕೆ ಆದ್ಯತೆ ನೀಡುವುದು ನಮ್ಮ ಸರ್ಕಾರದ ಧ್ಯೇಯವಾಗಿದ್ದು, ವಿದ್ಯಾರ್ಥಿಗಳ ಉನ್ನತ ಕಲಿಕೆಗೆ ಪೂರಕವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಊರಕೇರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು. ಈಚೆಗಿನ ದಿನಗಳಲ್ಲಿ ನಿರ್ಮಾಣವಾದ ಕೆಲವೇ ವರ್ಷಗಳಲ್ಲಿ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪುತ್ತಿರುವುದು ಬೇಸರದ ಸಂಗತಿಯಾಗಿದೆ. ಹೆಂಚುಗಳ ಬಳಕೆ ಮಾಡಿದರೆ ಮಂಗನ ಕಾಟದಿಂದ ಹಾನಿಗೀಡಾಗುವುದು ಕೂಡ ನಮ್ಮ ಭಾಗದಲ್ಲಿ ಸಾಮಾನ್ಯವಾಗಿದೆ. ಆದರೂ ಕೂಡ ಸೂಚನೆ ನೀಡಿದಂತೆ ಗುಣಮಟ್ಟದ ಕಾಮಗಾರಿ ನಡೆಸಿ ಕೊಠಡಿ ನಿರ್ಮಿಸಿರುವುದು ಸಮಾಧಾನಕರ ಬೆಳವಣಿಗೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್ಟ ಮಾತನಾಡಿ, ಶಾಸಕ ದಿನಕರ ಶೆಟ್ಟಿ ಅವರು ಚುರುಕುಗತಿಯ ಸ್ಪಂದನೆ ಮೂಲಕ ಶೈಕ್ಷಣಿಕ ರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಜೊತೆಗೆ ಎಲ್ಲಾ ಮಕ್ಕಳಿಗೂ ಉತ್ತಮ ಶಿಕ್ಷಣ ದೊರಕಿಸುವ ಸಲುವಾಗಿ ಒಂದೇ ಗ್ರಾಮ ಒಂದೇ ಶಾಲೆ ಎಂಬ ವಿಭಿನ್ನ ಕಲ್ಪನೆಯನ್ನೂ ಹೊಂದಿದ್ದಾರೆ. ಇದು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಶಿಕ್ಷಕಿ ಶೈಲಜಾ ಆಚಾರ್ಯ ಸ್ವಾಗತಿಸಿದರು. ಭಾಗ್ಯಲತಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಎಸ್. ಬಿ.ನಾಯಕ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಕಾಶ ಶಾನಭಾಗ, ಉಪಾಧ್ಯಕ್ಷೆ ಗಂಗಾ ಭಟ್ಟ, ಸದಸ್ಯರಾದ ಗಣಪತಿ ಭಟ್ಟ, ಪುಷ್ಪಾ ನಾಯ್ಕ, ಮಂಜುನಾಥ ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ಗಂಗಾಧರ ಪಟಗಾರ, ಉಮೇಶ ನಾಯ್ಕ ಇದ್ದರು.