ಹೊನ್ನಾವರ:ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆಯು ಕುಸಿದು ಹಾನಿ ಉಂಟಾಗಿದೆ ಎಂದು ತಿಳಿದು ಬಂದಿದೆ. ಕೆಲವು ದಿನಗಳಿಂದ ಧಾರಾಕಾರ ಸುರಿಯುತ್ತಿರುವ ಮಳೆಗೆ ಶಾಲೆಯ ಮೈದಾನ ಮತ್ತು ಗಟಾರಕ್ಕೆ ನೀರು ನುಗ್ಗಿದ ಪರಿಣಾಮ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ ಎನ್ನಲಾಗಿದೆ.
ಶಾಲೆಯ ಮೂರು ವರ್ಗ ಕೋಣೆಗಳು ತುಂಬಾ ಹಳೆಯದಾಗಿದ್ದು, ಕುಸಿಯುವ ಭೀತಿ ಎದುರಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಆತಂಕದಲ್ಲೇ ಪಾಠ ಕಲಿಯುವಂತಾಗಿದೆ. ಅಲ್ಲದೇ ಪ್ರಭಾತನಗರ ಶಾಲೆಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ, ಕಾಂಪೌಂಡ್ ಮತ್ತು ಮೈದಾನದ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಮಾಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಿಕ್ಷಣಾಧಿಕಾರಿಗಳು ಕೇಳಿದರೆ ಪಟ್ಟಣ ಪಂಚಾಯತಿಗೆ ತಿಳಿಸಿ ಎನ್ನುತ್ತಾರೆ. ಪಟ್ಟಣ ಪಂಚಾಯತಿಯವರು ಕೇಳಿದರೆ ಶಾಸಕರಿಗೆ ತಿಳಿಸಿ ಎನ್ನುತ್ತಾರೆ. ಶಾಸಕರನ್ನು ಶಾಲೆಗೆ ಕರೆಯಿಸಿ ಸಮಸ್ಯೆ ಕುರಿತು ಮಾಹಿತಿ ನೀಡಲಾಗಿತ್ತು. ಆದರೆ ಸಮಸ್ಯೆ ಬಗೆಹರಿಯದ ಪರಿಣಾಮವಾಗಿ ಕಟ್ಟಡ ಕುಸಿದು ಬಿದ್ದಿದೆ ಎಂದು ತಿಳಿದು ಬಂದಿದೆ.
ಈ ಘಟನೆ ಸಂಭವಿಸಿದ ಬಳಿಕ ಸ್ಥಳಕ್ಕೆ ಆಗಮಿಸಿದ ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ ಹಾಗೂ ವಾರ್ಡ್ ಸದಸ್ಯೆ ಮೇಧಾ ನಾಯ್ಕ ಸ್ಥಳದಲ್ಲೆ ಇದ್ದು, ಜೆಸಿಬಿ ಯಂತ್ರದ ಮೂಲಕ ಗಟಾರ ಸ್ವಚ್ಛತೆ ಹಾಗೂ ಶಾಲಾ ಆವರಣದಲ್ಲಿ ನೀರು ಸರಾಗವಾಗಿ ಸಾಗಲು ಅನುವು ಮಾಡಿಕೊಟ್ಟರು ಎನ್ನಲಾಗಿದೆ.
ಶಾಸಕ ದಿನಕರ ಶೆಟ್ಟಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಮಂಬರುವ ದಿನದಲ್ಲಿ ಕಾಂಪೌಂಡ್ ಹಾಗೂ ಹೊಸ ಕಟ್ಟಡ ನಿರ್ಮಿಸುವ ಭರವಸೆ ನೀಡಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಎಚ್.ಎಂ.ಮಾರುತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಟ್ಟಡ ಕೊರತೆ ಹಾಗೂ ಶಿಕ್ಷಕರ ಕೊರತೆ ಸೇರಿದಂತೆ ಶಾಲೆಯ ವಿವಿಧ ಬೇಡಿಕೆಯ ಕುರಿತಾಗಿ. ಮಾಹಿತಿ ನೀಡಿದರು. ಹಂತಹಂತವಾಗಿ ಸಮಸ್ಯೆ ಬಗೆಹರಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು ಎಂದು ವರದಿಯಾಗಿದೆ.