ಕಾರವಾರ : ತಾಲೂಕಿನ ಮಾಜಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಲ್ಲಿಸುವಂತೆ ಕೈ ಸನ್ನೆ ಮಾಡಿದ್ದರೂ ಸಹ ನಿಲ್ಲಸದೇ ಪರಾರಿಯಾಗುತ್ತಿದ್ದ ವೇಳೆ ಅಬಕಾರಿ ಸಿಬ್ಬಂದಿಗಳು ಕಾರನ್ನು ಬೆನ್ನಟ್ಟಿ ಹೋಗಿ ಅಕ್ರಮವಾದ ಮದ್ಯ ಮತ್ತು ಇಬ್ಬರು ಆರೋಪಿಗಳೊಂದಿಗೆ 2.20 ಲಕ್ಷ ರು.ಗೂ ಅಧಿಕ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದಿರುವ ಘಟನೆ
ನಡೆದಿದೆ ಎಂದು ತಿಳಿದುಬಂದಿದೆ.ಅಕ್ರಮವಾಗಿ ಗೋವಾ ಸರಾಯಿಯನ್ನು ಮಾರುತಿ ಜೆನ್ ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಅಬಕಾರಿ ಉಪ ನಿರೀಕ್ಷಕ ಶಂಕ ಚೌಗಲೆ ನೇತೃತ್ವದ ಅಬಕಾರಿ ಜಿಲ್ಲಾ ತಂಡದ ಸಿಬ್ಬಂದಿಗಳು ಮಾಜಾಳಿಯ ಮೀನು ಮಾರುಕಟ್ಟೆ ಎದುರು ಕಾರು ನಿಲ್ಲಿಸುವಂತೆ ಕೈ
ಸನ್ನೆ ಮಾಡಿದ್ದಾರೆ,ಆದರೆ ಕಾರು ನಿಲ್ಲಿಸದೇ ಕಾರವಾರ ಮಾರ್ಗವಾಗಿ ತೆರಳುತ್ತಿದ್ದ ಸಮಯದಲ್ಲಿ ಕಾರನ್ನು ಬೆನ್ನಟ್ಟಿದ ಅಬಕಾರಿ ಸಿಬ್ಬಂದಿಗಳು ಗಾಂವಗೇರಿ ಕ್ರಾಸ್ ಬಳಿ ಕಾರನ್ನು ಪರಿಶೀಲನೆ ನಡೆಸಿದ್ದು ಈ ವೇಳೆ 15.250 ಲೀಟರ್ ಗೋವಾ ಮದ್ಯ, 3.750 ಲೀಟರ್ ಗೋವಾ ಫೆನ್ನಿ ಹಾಗೂ 3.500 ಗೋವಾ ಬಿಯರ್ ಸೇರಿದಂತೆ ಒಟ್ಟು 2, 20, 440 ರು ಮೌಲ್ಯದ ಅಕ್ರಮ ಸಾಗಾಟ ಮಾಡಲು ಬಳಸಿದ್ದ 2 ಲಕ್ಷ ರು.ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರು ಆರೋಪಿಗಳಾದ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದ ಚಾಲಕ ನಾಗರಾಜ ಗೌಡ (36) ಹಾಗೂ ವಜ್ರಳ್ಳಿ ಗ್ರಾಮದ ರವಿಕುಮಾರ ಪೂಜಾರಿ (24) ಎಂಬುವವರನ್ನು
ವಶಕ್ಕೆ ಪಡೆಯಲಾಗಿದೆ. ಅಬಕಾರಿ ಉಪ ಆಯುಕ್ತ ವನಜಾಕ್ಷಿ ಎಂ.ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ
ಸಿಬ್ಬಂದಿಗಳಾದ ನಾಗರಾಜ, ಆನಂದು ಪೊಂಡೇಕರ್ ಇದ್ದರು ಎಂದು ವರದಿಯಾಗಿದೆ.