ಕುಮಟಾ: ಸಂತೇಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂಡಬೈಲ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು,ಮಳೆ ಬಂದಾಗ ನೀರು ತುಂಬಿಕೊಂಡು ತೊಂದರೆಯಾಗಿದೆ ಎಂದು ತಿಳಿದು ಬಂದಿದೆ. ಇದು ಪಿಡಬ್ಲುಡಿ ರಸ್ತೆಯಾಗಿದ್ದು, ಸಮರ್ಪಕ ನಿರ್ವಹಣೆ ಮಾಡದ ಕಾರಣ ರಸ್ತೆ ಸಂಪೂರ್ಣ ಹದಗೆಟ್ಟಿದೆ ಎನ್ನಲಾಗಿದೆ.
ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹೊಂಡಗಳು ಇದ್ದು ಮಳೆಗಾಲದಲ್ಲಿ ಸಮಯದಲ್ಲಿ ಈ ಹೊಂಡಗಳಲ್ಲಿ ನೀರು ತುಂಬಿಕೊಂಡು ರಸ್ತೆ ಯಾವುದು,ಹೊಂಡ ಯಾವುದು ಎಂಬುದು ಗೋಚರಿಸದೆ ದ್ವಿಚಕ್ರ ವಾಹನ ಸವಾರರು ಬಿದ್ದು, ಪೆಟ್ಟು ಮಾಡಿಕೊಳ್ಳುವ ದುಃಸ್ಥಿತಿ ಉಂಟಾಗಿದೆ. ಜೋರಾಗಿ ಮಳೆ ಸುರಿದರೆ ಸಾಕು ರಸ್ತೆಯುದ್ದಕ್ಕೂ ನೀರು ತುಂಬಿಕೊಂಡು ಸಂಚಾರಕ್ಕೆ ತುಂಬಾ ತೊಂದರೆ ಮಾಡಿದೆ ಎಂದು ತಿಳಿದುಬಂದಿದೆ.
ಈಗಾಗಲೇ ರಸ್ತೆ ದುರಸ್ತಿ ಮಾಡಿಕೊಡುವಂತೆ ಪಿಡಬ್ಲುಡಿ ಅಧಿಕಾರಿಗಳನ್ನು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸ್ಥಳೀಯ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ, ರಸ್ತೆಯ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆದು ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಸ್ಥಳೀಯರಾದ ಮುಜಾಫರ್ ಅಬ್ದುಲ್ ಕರೀಮ್ ಸಾಬ್, ಮಾದವ ನಾಯ್ಕ, ರೀಹಾನ್ ಸಾಬ್, ಎಂ ಡಿ ಗೌಸ್, ಆರ್ ವಿ ಭಂಡಾರಿ, ರವಿ ಎಂ ನಾಯ್ಕ, ಸಮೀಮ್ ಖಾಜಿ ಮತ್ತಿತರರು ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ.