ಕುಮಟಾ: ೧೯೩೯ ಜುಲೈ ೮ ರಂದು ಕಾರವಾರದಲ್ಲಿ ಸ್ಥಾಪನೆಯಾದ ಅಖಿಲ ಭಾರತೀಯ ಕೊಂಕಣಿ ಪರಿಷತ್ತಿನ ೮೪ನೆಯ ಸಂಸ್ಥಾಪನಾ ದಿನಾಚರಣೆಯನ್ನು ಜು. ೮ ರಂದು ಬೆ.೧೦ ಗಂಟೆಗೆ ಕುಮಟಾದ ರೋಟರಿಯ ನಾದಶ್ರೀ ಕಲಾಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷರಾದ ಅರುಣ ಉಭಯಕರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿ.ಮಾಧವ ಮಂಜುನಾಥ ಶ್ಯಾನುಭಾಗ ಹೆರವಟ್ಟಾ ಅದರ ಮೂಲ ಸಂಸ್ಥಾಪಕರಾಗಿದ್ದು, ಕೊಂಕಣಿ ಜನರಲ್ಲಿ ತಮ್ಮ ಮಾತೃಭಾಷೆಯ ಕುರಿತು ಸ್ವಾಭಿಮಾನ ಹಾಗೂ ಜಾಗೃತಿ ಉಂಟು ಮಾಡಲು ಸತತವಾಗಿ ಊರಿಂದೂರಿಗೆ ತಿರುಗಾಡಿ ಪರಿಶ್ರಮ ಪಟ್ಟ ಫಲವಾಗಿ ಇಂದು ಬೃಹತ್ ಸಂಘಟನೆಯಾಗಿ ಮೈದಳೆದಿದೆ. ಈ ಸಂಸ್ಥೆಯಲ್ಲಿ ಗೋವಾ, ಮಹಾರಾಷ್ಟç, ಕೇರಳ ಹಾಗೂ ಕರ್ನಾಟಕ ಈ ನಾಲ್ಕು ರಾಜ್ಯಗಳ ಪ್ರತಿನಿಧಿಗಳು ಪ್ರಾತಿನಿಧ್ಯ ಹೊಂದಿರುತ್ತಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ನಂದಗೋಪಾಲ ಶೆಣೈ, ಅಧ್ಯಕ್ಷರು ಕೊಂಕಣಿ ಭಾಷೆ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಗೋವಾದ ಖ್ಯಾತ ಕೊಂಕಣಿ ಚಳವಳಿಗಾರ ಹಾಗೂ ಸಾಹಿತಿ ಅರವಿಂದ ಭಾಟಿಕರ, ಐಎಎಸ್ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್ತಿನ ಅಧ್ಯಕ್ಷರಾದ ಅರುಣ ಉಭಯಕರ ವಹಿಸಲಿದ್ದಾರೆ. ೧೧ ಗಂಟೆಯಿಂದ ಮಾತೃಭಾಷೆ ಹಾಗೂ ಕೊಂಕಣಿ ಪರಿಷತ್ತಿನ ಕುರಿತು ಹಿರಿಯ ಚಿಂತಕ ತ್ರಿವಿಕ್ರಮ ಬಾಬಾ ಪೈ ಅವರ ಅಧ್ಯಕ್ಷತೆಯಲ್ಲಿ ವಿಚಾರ ಸಂಕಿರಣ ನಡೆಯಲಿದೆ. ೧೧.೩೦ಕ್ಕೆ ಗೋವಾದ ಕವಿ ಗೌರೀಶ್ ವೆರ್ಣೇಕರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕವಿಗಳಾದ ನಾಗೇಶ್ ಅಣ್ವೇಕರ ಕಾರವಾರ, ವಾಸುದೇವ ಶಾನಭಾಗ ಶಿರಸಿ, ವನಿತಾ ನಾಯಕ ಕುಮಟಾ ಭಾಗವಹಿಸಲಿದ್ದಾರೆ. ೧೨.೩೦ರಿಂದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕೊಂಕಣಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಪ್ರೋತ್ಸಾಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸಂಘಟಕರು ಕೋರಿದ್ದಾರೆ.