ಪದವಿಧರರು ಉದ್ಯೋಗವನ್ನು ಪಡೆಯಬೇಕೆಂಬ ಹಿತದೃಷ್ಟಿಯಿಂದ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ದೇಶಪಾಂಡೆ ಫೌಂಡೇಶನ್’ನ ಕೌಶಲ್ಯಾಭಿವೃದ್ಧಿ ಪರಿಚಯ ಹಾಗೂ ಪರಸ್ಪರ ಒಡಂಬಡಿಕೆ ಹಸ್ತಾಂತರ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ದೇಶಪಾಂಡೆ ಫೌಂಡೇಶನ್’ನ ಪ್ರಾದೇಶಿಕ ಮ್ಯಾನೇಜರಾದ ಶ್ರೀನಿವಾಸ ನಾಯ್ಕ ಮಾತನಾಡಿ, “ದೇಶಪಾಂಡೆ ಫೌಂಡೇಶನ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಉದ್ಯೋಗವನ್ನು ಪಡೆಯಬೇಕೆಂಬ ಕನಸಿನೊಂದಿಗೆ ಹುಟ್ಟಿಕೊಂಡ ಸಂಸ್ಥೆಯಾಗಿದ್ದು, ಇದರ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಸೂಚಿಸಿದರು”
ಭಟ್ಕಳ ಎಜ್ಯುಕೇಶನ್ ಟ್ರಸ್ಟ್’ನ ಅಧ್ಯಕ್ಷರಾದ ಡಾ. ಸುರೇಶ ನಾಯಕರವರು “ವಿವಿಧ ಕೌಶಲ್ಯ ಹೊಂದಿದವರಿಗೆ ಮಾತ್ರ ಉದ್ಯೋಗವನ್ನು ಪಡೆಯಲು ಸಾಧ್ಯ, ಕಾರಣ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಗಮನವನ್ನು ನೀಡಬೇಕು” ಎಂದು ಕರೆ ನೀಡಿದರು.
ಭಟ್ಕಳ ಎಜ್ಯುಕೇಶನ್ ಟ್ರಸ್ಟ್’ನ ಟ್ರಸ್ಟೀ ಮ್ಯಾನೇಜರ್ ರಾಜೇಶ ನಾಯಕ ಮಾತನಾಡಿ “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ತರಬೇತಿಗಳು ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿಯೊಂದಿಗೆ ದೃಢವಿಶ್ವಾಸ ಮೂಡಿಸಲು ನೆರವಾಗುತ್ತದೆ, ಇದು ನಮ್ಮ ಕಾಲೇಜಿನಲ್ಲಿ ಲಭ್ಯವಾಗುತ್ತಿರುವುದು ಹೆಚ್ಚಿನ ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ಭರವಸೆ ಮೂಡಿಸಿರುವುದು ಶ್ಲಾಘನೀಯ” ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀನಾಥ ಪೈ ಸರ್ವರನ್ನು ಸ್ವಾಗತಿಸಿ, ಈ ಕಾರ್ಯಕ್ರಮದ ಮಹತ್ವದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು. ಕಾಲೇಜಿನ ಉದ್ಯೋಗಾಧಿಕಾರಿ ವಿಘ್ನೇಶ ಪ್ರಭು ವಂದಿಸಿದರೆ & ಬಿ.ಬಿ.ಎ ವಿದ್ಯಾರ್ಥಿನಿ ಪೂಜಾ ಕಂಚುಗಾರ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.