ಅಂಕೋಲಾ : ತಾಲೂಕಿನ ಹಾರವಾಡದ ರೈಲ್ವೆ ಬೀಜ್ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಬಡಿದ ಪರಿಣಾಮ ಕಾರಿನಲ್ಲಿದ್ದ ಓರ್ವ ಮೃತಪಟ್ಟು, ನಾಲ್ವರಿಗೆ ಗಾಯವಾಗಿರುವ ಘಟನೆ ಸಂಜೆ ನಡೆದಿದೆ.
ಆಂಧ್ರಪ್ರದೇಶದ ಅನಂತಪುರದ ನಿವಾಸಿ, ವಿದ್ಯಾರ್ಥಿ ರವಿತೇಜ್ ಉಪ್ಪಾರ (21) ಮೃತ ವ್ಯಕ್ತಿ ಕಾರು ಚಾಲಕ ಪವನ್ ಬಿ, ಬಾಲಚಂದ್ರ ಕೈತಾವರ, ಮೋಹನ ಸಾಯಿ, ಬೊಯೆಜ್ ಕುಮಾರ ಗಾಯಗೊಂಡವರು. ಆಂಧ್ರ ಪ್ರದೇಶದ ಜಿಮಿಟಿ ಕಾಲೇಜಿನ 10 ವಿದ್ಯಾರ್ಥಿಗಳು ಎರಡು ಕಾರಿನಲ್ಲಿ ಪ್ರವಾಸಕ್ಕೆಂದು ಬಂದಿದ್ದರು. ಸೋಮವಾರ ಬೆಳಿಗ್ಗೆ ಗೋಕರ್ಣವನ್ನು ವೀಕ್ಷಿಸಿ, ಸಂಜೆ ಅಂಕೋಲಾದಿಂದ ಗೋವಾದತ್ತ ಹೊರಟಿದ್ದರು. ಕಾರು ಅಂಕೋಲಾದ ಹಾರವಾಡದ ರೈಲ್ವೆ ಬೀಜ್ ಬಳಿ ಬರುತ್ತಿರುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ.
ನಂತರ ಕಾರು ಪಲ್ಟಿಯಾಗಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಹೋಗಿ ಗುದ್ದಿದೆ. ಕಾರಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಕಾರಿನಲ್ಲಿದ್ದ ರವಿತೇಜನಿಗೆ ವಿದ್ಯುತ್ ತಗುಲಿದೆ. ಗಾಯಗೊಂಡಿದ್ದ ರವಿತೇಜ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರು ಬೆಂಕಿಗೆ ಆಹುತಿಯಾಗುತ್ತಲ್ಲೇ ಕಾರಿನಲ್ಲಿದ್ದ ಇನ್ನು
ನಾಲ್ವರು ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.