ಶಿರಸಿ: ಸಿದ್ದಾಪುರ ತಾಲ್ಲೂಕಿನ ಗುಡ್ಡೆಶಿರಗೋಡ ಗ್ರಾಮದ ಧನ್ಯಾ ಹೆಗಡೆ ಕೇವಲ ಏಳು ಹಲಸಿನ ಎಲೆಗಳನ್ನು ಬಳಸಿ ಹಿಂದಿ ಅಕ್ಷರದಲ್ಲಿ ರಾಷ್ಟ್ರಗೀತೆ ಬರೆಯುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಕೆಲ ತಿಂಗಳಿನಿಂದ ಈಕೆ ಹಲಸಿನ ಎಲೆಗಳ ಮೇಲೆ ರಾಷ್ಟ್ರಗೀತೆ ಬರೆಯುವ ಪ್ರಯತ್ನ ನಡೆಸಿದ್ದಳು. ಸತತ ಪ್ರಯತ್ನದ ಫಲವಾಗಿ ಮೇ ತಿಂಗಳಿನಲ್ಲಿ ಕೇವಲ ಏಳು ಎಲೆಗಳಲ್ಲೇ ಗುರಿ ಸಾಧಿಸಿದ್ದಾಳೆ ಎನ್ನಲಾಗಿದೆ. ಈಕೆಯ ಸಾಧನೆಯನ್ನು ಜೂನ್.4 ರಂದು ಪುರಸ್ಕರಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ ಹೆಸರು ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.
ಧನ್ಯ ಹೆಗಡೆ ಇವಳು ಕೃಷ್ಣಮೂರ್ತಿ ಹೆಗಡೆ ಮತ್ತು ಸವಿತಾ ಹೆಗಡೆ ದಂಪತಿಯ ಪುತ್ರಿಯಾಗಿದ್ದು, ಪ್ರಸ್ತುತ ಸರಕುಳಿಯ ಜಗದಂಬಾ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ತಿಳಿದುಬಂದಿದೆ.