ಕಾರವಾರ : ಉತ್ತರ ಕನ್ನಡದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅನಾಹುತಗಳು ಸಂಭವಿಸುತ್ತಿದ್ದರೆ ಇನ್ನೊಂದೆಡೆ ಮಳೆ ಮುಂದುವರೆಯುವ ಮುನ್ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಇನ್ನೂ ಕೆಲ ದಿನ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಕರಾವಳಿ ಭಾಗದಲ್ಲಿ ಜು. 14 ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಹೆಚ್ಚಿನ ಮಳೆಯಾಗುವ ಕಾರಣ 12ರವರೆಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ರೆಡ್ ಅಲರ್ಟ್ ಘೋಷಿಸಿದೆ. ಈ ಅವಧಿಯಲ್ಲಿ ಮಂಗಳೂರಿನಿಂದ ಕಾರವಾರದವರೆಗಿನ ಕರಾವಳಿ ಹಾಗೂ ವೆಂಗುರ್ಲಾದಿಸಿದ ವಾಸ್ಕೋ ನಡುವಿನ ಗೋವಾ ಕರಾವಳಿಯುದ್ದಕ್ಕೂ ಜು.11ರ ರಾತ್ರಿ 11.30ರವರೆಗೆ 3.5-4 ಮೀಟರ್‌ನಷ್ಟು ಎತ್ತರದ ಅಲೆಗಳು ಏಳಲಿದೆ.
ಕರ್ನಾಟಕ ಕರಾವಳಿಯಲ್ಲಿ ಅಲೆಗಳ ಪ್ರಸ್ತುತ ವೇಗವು ಸೆಕೆಂಡಿಗೆ 61- 75 ಸೆಂ. ಮೀ. ನಷ್ಟಿದ್ದು, ಗೋವಾದಲ್ಲಿ 55- 73 ಸೆಂ.ಮೀ. ಇದೆ ಎಂದು ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ ತಿಳಿಸಿದೆ. ಇನ್ನು ಉತ್ತರ ಒಳನಾಡಿನಲ್ಲಿ 5 ದಿನ ಯೆಲ್ಲೋ ಅಲರ್ಟ್, ದಕ್ಷಿಣ ಒಳನಾಡಿನಲ್ಲಿ 3 ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಶಿವಮೊಗ್ಗ, ಕೊಡಗು, ಹಾಸನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಇನ್ನೂ 5 ದಿನಗಳ ಕಾಲ ಮಳೆ ಸುರಿಯುವ ಮುನ್ಸೂಚನೆ ಇದೆ. ಸಂಜೆ ವೇಳೆ ಗಾಳಿ ಸಹಿತ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ.