ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯು ಎಡಬಿಡದೆ ಸುರಿಯುತ್ತಿದ್ದು ಜನ ಜೀವನ ತತ್ತರವಾಗಿದೆ.ಇದೀಗ ಗುಡ್ಡ ಕುಸಿತದಿಂದಾಗಿ ಅಣಶಿ ಘಟ್ಟದಲ್ಲಿ ಪ್ರಮುಖ ಹೆದ್ದಾರಿಯ ಸಂಪರ್ಕವೇ ಕಳೆದುಕೊಂಡು ಪ್ರಯಾಣಿಕರು ಪರದಾಡುವಂತಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಕಾರವಾರದಿಂದ ಜೋಯಿಡಾ, ದಾಂಡೇಲಿ, ಬೆಳಗಾವಿ, ಧಾರವಾಡಕ್ಕೆ ತೆರಳಲು ಇದು ಪ್ರಮುಖ ರಸ್ತೆಯಾಗಿದ್ದು, ಪ್ರತಿನಿತ್ಯ ಸಾವಿರಾರು ಜನರು ಓಡಾಡುತ್ತಿದ್ದರು. ಇನ್ನು ರಸ್ತೆ ಸರಿಪಡಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಜೋಯಿಡಾ ತಾಲೂಕಿನ ವಿವಿಧ ಗ್ರಾಮಗಳಿಂದ ಪ್ರತಿನಿತ್ಯ ಕದ್ರಾ, ಕೈಗಾಕ್ಕೆ ಕೆಲಸಕ್ಕಾಗಿ ಜನರು ಬರುತ್ತಿದ್ದರು. ಅಲ್ಲದೇ ಕದ್ರಾ, ಕೈಗಾ ಭಾಗದಿಂದ ಧಾರವಾಡ, ಬೆಳಗಾವಿಗೆ ಸಾಕಷ್ಟು ಜನರು ಓಡಾಡುತ್ತಿದ್ದು ಇದೀಗ ರಸ್ತೆ ಸಂಪರ್ಕ ಇಲ್ಲದೇ ನೂರಾರು ಕಿಲೋ ಮೀಟರ್ ಸುತ್ತಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನಲಾಗಿದೆ.