ರಾಮನಗರ: ಈಜಲೆಂದು ಕಲ್ಯಾಣಿಗೆ ಇಳಿದಿದ್ದ ವಿದ್ಯಾರ್ಥಿ ಮುಳುಗಿ ಮೃತಪಟ್ಟ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ರಾವುಗೂಡ್ಲು ಗ್ರಾಮದ ಗುಂಡಾಂಜನೇಯಸ್ವಾಮಿ ದೇವಸ್ಥಾನದ ಬಳಿ ಭಾನುವಾರ ನಡೆದಿದೆ. ಸಹಪಾಠಿಗಳು ಸೆಲ್ಫಿ ತೆಗೆದುಕೊಂಡಿರುವ ಚಿತ್ರದಲ್ಲಿ ಹುಡುಗ ನೀರಿನಲ್ಲಿ ಮುಳುಗುತ್ತಿದ್ದ ಸಂದರ್ಭ ಸೆರೆಯಾಗಿದ್ದು, ಈ ಚಿತ್ರ ಈಗ ವೈರಲ್ ಆಗಿವೆ.
ಬೆಂಗಳೂರಿನ ನ್ಯಾಷನಲ್ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ವಿಶ್ವಾಸ್ (17) ಮೃತ ಯುವಕ. ಹನುಮಂತನಗರದ ನಿವಾಸಿಯಾದ ಈತ ಎನ್‌ಸಿಸಿ ಕ್ಯಾಂಪ್ ಅಂಗವಾಗಿ ತನ್ನ 20ಕ್ಕೂ ಹೆಚ್ಚು ಸಹಪಾಠಿಗಳೊಡನೆ ಪ್ರೊ. ಗಿರೀಶ್ ಎಂಬುವರ ನೇತೃತ್ವದಲ್ಲಿ ಇದೇ 23ರಂದು (ಶನಿವಾರ) ಕಾಲೇಜಿನಿಂದ ತೆರಳಿದ್ದ. ಭಾನುವಾರ ಬೆಳಿಗ್ಗೆ ಎಲ್ಲರೂ ಸೇರಿ ಸಮೀಪದ ಬೆಟ್ಟದಲ್ಲಿ ಚಾರಣ ಕೈಗೊಂಡಿದ್ದು, ಬಳಿಕ ಈಜಲು ಕಲ್ಯಾಣಿಗೆ ಇಳಿದಿದ್ದರು. ಈ ಸಂದರ್ಭ ವಿಶ್ವಾಸ್ ಕಲ್ಯಾಣಿಯ ಮಧ್ಯಭಾಗಕ್ಕೆ ತೆರಳಿದ್ದು, ಈಜಲು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟ ಎಂದು ಪೊಲೀಸರು ತಿಳಿಸಿದರು.
ವಿಶ್ವಾಸ್ ತಂದೆ ಗೋವಿಂದಯ್ಯ ಪೊಲೀಸರಿಗೆ ದೂರು ನೀಡಿದ್ದು, ಭಾನುವಾರ ಸಂಜೆ ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಒಪ್ಪಿಸಲಾಯಿತು. ಘಟನೆಯನ್ನು ಖಂಡಿಸಿ ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಂಬಂಧಿಕರು ಹಾಗೂ ಸ್ನೇಹಿತರು ಶವವನ್ನು ಇಟ್ಟು ಕಾಲೇಜಿನ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.