ಮಂಗಳೂರು: 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಪ್ರೊ. ಚಂದ್ರಶೇಖರ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ.
ಮೈಸೂರಿನಲ್ಲಿ ನವೆಂವರ್ 24ರಿಂದ 26 ರವರೆಗೆ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಪ್ರೊ. ಚಂದ್ರಶೇಖರ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ಅವರು ಸೋಮವಾರ ತಿಳಿಸಿದರು.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರುವ ಪ್ರೊ. ಚಂದ್ರಶೇಖರ ಪಾಟೀಲ ಅವರು, 2009ನೇ ಸಾಲಿನ ಪಂಪ ಪ್ರಶಸ್ತಿಗೆ ಪಾತ್ರರಾಗಿದ್ದರು.
ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಖಂಡಿಸಿದ್ದ ಪ್ರೊ. ಚಂದ್ರಶೇಖರ ಪಾಟೀಲ ಅವರು, 2009ನೇ ಸಾಲಿನ ಪಂಪ ಪ್ರಶಸ್ತಿಯನ್ನು 2015ರಲ್ಲಿ ಸರ್ಕಾರಕ್ಕೆ ಹಿಂದಿರುಗಿಸಿದ್ದರು.
‘ಪ್ರಶಸ್ತಿ ಹಿಂದಿರುಗಿಸುತ್ತಿದ್ದೇನೆ’ ಎಂಬ ಪತ್ರವನ್ನು ಚಂಪಾ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ ಅವರಿಗೆ ಸಲ್ಲಿಸಿದ್ದರು. ಪತ್ರದ ಜತೆ ಪ್ರಶಸ್ತಿಯ ಮೊತ್ತವಾದ ₹3 ಲಕ್ಷದ ಚೆಕ್ ಇತ್ತು.
ಡಾ. ಕಲಬುರ್ಗಿ ಮತ್ತು ಪತ್ರಕರ್ತ ಲಿಂಗಣ್ಣ ಸತ್ಯಂಪೇಟೆ ಹಂತಕರ ಪತ್ತೆಗೆ ತನಿಖಾಧಿಕಾರಿಗಳು ವಿಫಲರಾಗಿದ್ದಾರೆ, ಮೂಢನಂಬಿಕೆ ನಿಷೇಧ ಕಾನೂನನ್ನು ಸರ್ಕಾರ ಜಾರಿಗೊಳಿಸಿಲ್ಲ ಎಂಬ ಕಾರಣಕ್ಕೆ ಚಂಪಾ ಅವರು ಪ್ರಶಸ್ತಿ ಹಿಂದಿರುಗಿಸಿದ್ದರು.