ನವದೆಹಲಿ: ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.
ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಜನರ ಲಾಭಕ್ಕಾಗಿ ರಾಜಕೀಯ ಮಾಡಿ ಸ್ವಲಾಭಕ್ಕಾಗಿ ಬೇಡ ಎಂದಿದ್ದಾರೆ.
ಪ್ರಧಾನಿ ಮೋದಿ ಭಾಷಣದ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಬಿಜೆಪಿ ಚುನಾವಣೆಗಳನ್ನು ಮೀರಿ ಕೆಲಸ ಮಾಡಬೇಕು ಮತ್ತು ಇದರಲ್ಲಿ ಎಲ್ಲರೂ ಭಾಗಿಯಾಗಬೇಕು. ದೇಶ ಮೊದಲು, ನಂತರ ಪಕ್ಷ ಎಂಬ ಸಂದೇಶ ನೀಡಿರುವುದಾಗಿ ತಿಳಿಸಿದರು.
ಅಭಿವೃದ್ಧಿ ಕಾರ್ಯಗಳಲ್ಲಿ ಸಾರ್ವಜನಿಕರು ಭಾಗಿಯಾಗುವುದರಿಂದ ಜನರ ಜೀವನ ಗುಣಮಟ್ಟ ಸುಧಾರಣೆಯಾಗುತ್ತದೆ ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೆ ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ವಿರುದ್ಧದ ತಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿರುವುದಾಗಿ ಜೇಟ್ಲಿ ತಿಳಿಸಿದ್ದಾರೆ.
ಇದೇ ವೇಳೆ ದೇಶದ ಆರ್ಥಿಕತೆ ಕುಸಿಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಜೇಟ್ಲಿ, ಕಳೆದ ತ್ರೈಮಾಸಿಕದಲ್ಲಿ ಜಿಡಿಪಿ ಸ್ವಲ್ಪ ಕುಸಿತ ಕಂಡಿದೆ. ಇದಕ್ಕೆ ಹೂಡಿಕೆಯಲ್ಲಿನ ಮತ್ತು ಉತ್ಪಾದನಾ ಕ್ಷೇತ್ರದಲ್ಲಿನ ಕೊರತೆ ಕಾರಣ ಎಂದಿದ್ದಾರೆ.
ಇನ್ನು 2019ರ ಲೋಕಸಭೆ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಹಣಕಾಸು ಸಚಿವರು, ಬಿಜೆಪಿ ನೇತೃತ್ವದ ಎನ್ ಡಿಎ ಅವಧಿಯಲ್ಲೇ ಹೊಸ ಭಾರತ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.